ಜೂನ್, ಜುಲೈ ಆಯ್ತು, ಈಗ ಆಗಸ್ಟ್‌ಗೆ ಮುಂದೂಡಿಕೆಯಾದ ಅನ್ನಭಾಗ್ಯ ಯೋಜನೆ
ಜುಲೈ 1 ರಿಂದ ಅಕ್ಕಿ ಕೊಡೊಲ್ಲ. ಆದರೆ, ಆಗಸ್ಟ್ 1 ನೇ ತಾರೀಖಿಗಿಂತ ಮುಂಚಿತವಾಗೇ ಅಕ್ಕಿ ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಬೆಂಗಳೂರು (ಜೂ.22): ರಾಜ್ಯದಲ್ಲಿ ಇನ್ನೂ ಅಕ್ಕಿ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಆದ್ದರಿಂದ ಜುಲೈ 1 ರಿಂದ ಅಕ್ಕಿ ಕೊಡೊಲ್ಲ. ಆದರೆ, ಆಗಸ್ಟ್ 1 ನೇ ತಾರೀಖಿಗಿಂತ ಮುಂಚಿತವಾಗೇ ಅಕ್ಕಿ ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.
ಈ ಕುರಿತು ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ಮೂಲಗಳಿಂದ ಅಕ್ಕಿ ಖರೀದಿಸುವ ಪ್ರಯತ್ನಗಳು ಮುಂದುವರಿದಿದೆ. NCCF, ನಾಫೆಡ್, ಕೇಂದ್ರೀಯ ಭಂಡಾರದಿಂದ ಅಕ್ಕಿ ಖರೀದಿ ಪ್ರಕ್ರಿಯೆ ನಡೆಯಿತ್ತಿದೆ. ನಮಗೆ ಟ್ರಾನ್ಸ್‌ಪೋರ್ಟ್ ಚಾರ್ಜ್ ಕೂಡ ಹೆಚ್ಚಾಗಲಿದೆ. ಇದೆಲ್ಲಾ ಗಮನದಲ್ಲಿಟ್ಟುಕೊಂಡು ತೀರ್ಮಾನ ಮಾಡುತ್ತೇವೆ. ಅಕ್ಕಿ ನೀಡದೆ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ನಾವು ದೆಹಲಿಗೆ ತೆರಳಿದ್ದೆವು. ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯೆಲ್ ಭೇಟಿಗೆ ತೆರಳಿದ್ದೆನು. ಮೂರ್ನಾಲ್ಕು ದಿನಗಳ ಕಾಲ ಭೇಟಿಗೆ ಪ್ರಯತ್ನಿಸಿದೆ. ಆದರೂ ಭೇಟಿಗೆ ಅವಕಾಶ ಕೊಡಲೇ ಇಲ್ಲ. ಬಡವರಿಗೆ ನೀಡುವ ಅಕ್ಕಿ ವಿಚಾರದಲ್ಲೂ ಕೇಂದ್ರ ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.