News Hour: 2023ರ ಚುನಾವಣೆಗೆ ಅನಿವಾರ್ಯವಾದ್ರಾ ಬಿಎಸ್ ಯಡಿಯೂರಪ್ಪ!
ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕರ್ನಾಟಕ ರಾಜಕಾರಣದ ದೊಡ್ಡ ಮುಖ ಬಿಎಸ್ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಿದೆ. ಈ ಸುದ್ದಿ ಹೊರಬಿದ್ದ ಬೆನ್ನಲ್ಲಿಯೇ ರಾಜ್ಯ ಬಿಜೆಪಿಗೆ ಬಲ ಸಿಕ್ಕಂತಾಗಿದೆ. ಸಂಸದೀಯ ಮಂಡಳಿ ಮಾತ್ರವಲ್ಲದೆ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯಲ್ಲೂ ಯಡಿಯೂರಪ್ಪ ಸ್ಥಾನ ಪಡೆದಿದ್ದಾರೆ.
ಬೆಂಗಳೂರು (ಆ. 17): ಕರ್ನಾಟಕದಲ್ಲಿ ಬಿಜೆಪಿ ಪಾಲಿನ ಅತಿದೊಡ್ಡ ನಾಯಕ ಬಿಎಸ್ ಯಡಿಯೂರಪ್ಪಗೆ ಬಿಜೆಪಿ ಹೈಕಮಾಂಡ್ ಮಹತ್ವದ ಸ್ಥಾನ ನೀಡಿದೆ. ದೇಶದಲ್ಲಿ ಬಿಜೆಪಿಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಂಡಳಿ ಆಗಿರುವ ಸಂಸದೀಯ ಮಂಡಳಿಯ 11 ಮಂದಿ ಸದಸ್ಯರಲ್ಲಿ ಬಿಎಸ್ ಯಡಿಯೂರಪ್ಪ ಕೂಡ ಸ್ಥಾನ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿಯೊಬ್ಬರು ಸಂಸದೀಯ ಮಂಡಳಿಯಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು.
ಬಿಎಸ್‌ವೈ ಅವರಿಗೆ ಈ ಸ್ಥಾನ ನೀಡುವುದರೊಂದಿಗೆ 2023ರ ರಾಜ್ಯ ವಿಭಾನಸಭೆ ಚುನಾವಣೆಗೆ ಬಿಜೆಪಿ ಕೂಡ ಸಿದ್ಧವಾಗಿದೆ. ಮುಂಬರುವ ಚುನಾವಣೆಯ ನಿಟ್ಟಿನಲ್ಲಿಯೇ ಈ ಮಹತ್ವದ ನಿರ್ಧಾರ ಮಾಡಲಾಗಿದ್ದು, ಲಿಂಗಾಯತ ಮತಗಳು ಕೈತಪ್ಪಿ ಹೋಗದಂತೆ ಬಿಜೆಪಿ ಎಚ್ಚರ ವಹಿಸಿದೆ. ಬಿಎಸ್‌ವೈ ಅವರು ಮೊದಲ ಬಾರಿ ಸಂಸದೀಯ ಮಂಡಳಿಯಲ್ಲಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಹೈಕಮಾಂಡ್ ದೊಡ್ಡ ಜವಾಬ್ದಾರಿ ಕೊಟ್ಟಿದೆ, ಸ್ಥಾನಮಾನ ನಿರೀಕ್ಷಿಸಿರಲಿಲ್ಲ: ಬಿಎಸ್‌ವೈ
ಇನ್ನು ನಿತಿನ್ ಗಡ್ಕರಿ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್‌ಗೆ ಕೊಕ್ ನೀಡಲಾಗಿದೆ. ಕರ್ನಾಟಕದಿಂದ ಬಿ.ಎಲ್ ಸಂತೋಷ್ ಅವರಿಗೂ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಲಾಗಿದೆ. ಇದು ಘೋಷಣೆ ಆಗುತ್ತಿದ್ದಂತೆ ಬಿಎಸ್‌ವೈ ನಿವಾಸದಲ್ಲಿ ಸಿಹಿ ಹಂಚಿ ಬೆಂಬಲಿಗರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಬಿಎಸ್‌ವೈ ಕೂಡ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ 140 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.