ಇಂದಲ್ಲ, ನಾಳೆ ಮುಸ್ಲಿಮರು, ಕ್ರೈಸ್ತರು ಕೂಡ RSS ಆಗ್ತಾರೆ ಎಂದ ಈಶ್ವರಪ್ಪ!

ಆರ್ ಎಸ್ ಎಸ್ ಬಗ್ಗೆ ಸದನದಲ್ಲಿ ಬಿಸಿಬಿಸಿ ಚರ್ಚೆ

ಮೊದಲು ಮಾನವೀಯತೆ, ನಂತರ ಬಿಜೆಪಿ ಹಾಗೂ ಆರ್ ಎಸ್ಎಸ್ ಎಂದ ಸಿದ್ಧರಾಮಯ್ಯ

ಆರ್ ಎಸ್ ಎಸ್ ಬಗ್ಗೆ ಯಾಕಿಷ್ಟು ಸಿಟ್ಟು ಎಂದು ಪ್ರಶ್ನಿಸಿದ ಸ್ಪೀಕರ್

First Published Mar 24, 2022, 8:10 PM IST | Last Updated Mar 24, 2022, 8:10 PM IST

ಬೆಂಗಳೂರು (ಮಾ.24): ರಾಜ್ಯ ವಿಧಾನಸಭೆಯಲ್ಲಿ (VidhanaSabha) ಗುರುವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (Rashtriya Swayamsevak Sangh) ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು. ಕಾಂಗ್ರೆಸ್ (Congress) ಹಾಗೂ ಬಿಜೆಪಿ (BJP) ಪಕ್ಷದ ನಡುವೆ ಆರ್ ಎಸ್ ಎಸ್ (RSS)ವಿಚಾರ ಚರ್ಚೆಗೆ ಕಾರಣವಾಯಿತು. ಸಚಿವ ಅಶೋಕ್ ಅವರನ್ನು ಕಾಲೆಳೆಯುತ್ತಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ (Siddaramaiah) ಮಾತನಾಡಿದರು.


ನನಗೆ ಮೊದಲು ಮಾನವೀಯತೆ ನಂತರ, ಬಿಜೆಪಿ, ಕಾಂಗ್ರೆಸ್, ಆರ್ ಎಸ್ಎಸ್ ಎಂದು ಸಿದ್ಧರಾಮಯ್ಯ ಹೇಳಿದ್ದಕ್ಕೆ, ಸ್ಪೀಕರ್ ಸ್ಥಾನದಲ್ಲಿದ್ದ ಕಾಗೇರಿ, ನಮ್ಮ ಆರ್ ಎಸ್ಎಸ್ ಬಗ್ಗೆ ನಿಮಗೆ ಯಾಕಿಷ್ಟು ಕೋಪ ಎಂದುಬಿಟ್ಟರು. ಸ್ಪೀಕರ್ ಸ್ಥಾನದಲ್ಲಿ ಕುಳಿತು "ನಮ್ಮ ಆರ್ ಎಸ್ಎಸ್" ಎಂದಿದ್ದಕ್ಕೆ ಶಾಸಕ ಜಮೀರ್ ಅಹ್ಮದ್ ಆಕ್ಷೇಪ ವ್ಯಕ್ತಪಡಿಸಿದರು. ಇದರ ಬೆನ್ನಲ್ಲಿಯೇ ನಾಳೆ ನೀವೂ ಕೂಡ ನಮ್ಮ ಆರ್ ಎಸ್ಎಸ್ ಎಂದು ಹೇಳಬೇಕಾಗುವ ಪರಿಸ್ಥಿತಿ ಬರಬಹುದು ಎಂದು ಪ್ರತಿಕ್ರಿಯಿಸಿದರು.

ಮುಸ್ಲಿಂ ವ್ಯಾಪಾರಿಗಳಿಗೆ ಬಹಿಷ್ಕಾರ, ರಾಜ್ಯಾದ್ಯಂತ ಆಂದೋಲನಕ್ಕೆ ಶ್ರೀರಾಮಸೇನೆ ನಿರ್ಧಾರ

ಈ ನಡುವೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆಎಸ್ ಈಶ್ವರಪ್ಪ (ks eshwarappa), ಇಂದಲ್ಲ ನಾಳೆ ಮುಸ್ಲಿಮರು ಹಾಗೂ ಕ್ರೈಸ್ತರೂ ಕೂಡ ಆರ್ ಎಸ್ಎಸ್ ಆಗ್ತಾರೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಜೆ ಜಾರ್ಜ್, "ಇದು ಆಗಲ್ಲ, ಸಾಧ್ಯವೂ ಇಲ್ಲ, ಆಗ ನೀವೇ ಇರೋದಿಲ್ಲ ಎಂದು ತಿವಿದರು.