Kannada Prabha: ಕನ್ನಡಪ್ರಭ ಬೆಳಗಾವಿ ಆವೃತ್ತಿಗೆ ಬೆಳ್ಳಿಹಬ್ಬ ಸಂಭ್ರಮ

ಡೊಳ್ಳುಕುಣಿತದ ಗತ್ತು, ಜನಪದ ಹಾಡುಗಳ ಸೊಗಡು, ಅತಿಥಿ-ಗಣ್ಯರ ಶುಭ ಹಾರೈಕೆ, ಪತ್ರಿಕೆಯ ಕುರಿತು ಪ್ರಶಂಸೆಯ ನುಡಿಗಳು, ಪ್ರೇಕ್ಷಕರ ಕರತಾಡನದ ಮಧ್ಯದಲ್ಲಿ ‘ಕನ್ನಡಪ್ರಭ’ದ ಏಳ್ಗೆಗಾಗಿ ದುಡಿದವರಿಗೆ ಸವಿನೆನಪಿನ ಕಾಣಿಕೆ ಸಮರ್ಪಿಸಿದ ಆತ್ಮೀಯ ಕ್ಷಣ... ಈ ಎಲ್ಲ ಸಂಭ್ರಮಕ್ಕೆ ಸಾಕ್ಷಿಯಾದದ್ದು, ಕನ್ನಡಪ್ರಭ ಬೆಳಗಾವಿ ಆವೃತ್ತಿಯ ರಜತ ಮಹೋತ್ಸವ ಕಾರ್ಯಕ್ರಮ.

First Published Oct 2, 2022, 12:38 PM IST | Last Updated Oct 2, 2022, 12:38 PM IST

ಬೆಳಗಾವಿ: (ಅ.02): ಡೊಳ್ಳುಕುಣಿತದ ಗತ್ತು, ಜನಪದ ಹಾಡುಗಳ ಸೊಗಡು, ಅತಿಥಿ-ಗಣ್ಯರ ಶುಭ ಹಾರೈಕೆ, ಪತ್ರಿಕೆಯ ಕುರಿತು ಪ್ರಶಂಸೆಯ ನುಡಿಗಳು, ಪ್ರೇಕ್ಷಕರ ಕರತಾಡನದ ಮಧ್ಯದಲ್ಲಿ ‘ಕನ್ನಡಪ್ರಭ’ದ ಏಳ್ಗೆಗಾಗಿ ದುಡಿದವರಿಗೆ ಸವಿನೆನಪಿನ ಕಾಣಿಕೆ ಸಮರ್ಪಿಸಿದ ಆತ್ಮೀಯ ಕ್ಷಣ... ಈ ಎಲ್ಲ ಸಂಭ್ರಮಕ್ಕೆ ಸಾಕ್ಷಿಯಾದದ್ದು, ಕನ್ನಡಪ್ರಭ ಬೆಳಗಾವಿ ಆವೃತ್ತಿಯ ರಜತ ಮಹೋತ್ಸವ ಕಾರ್ಯಕ್ರಮ. ಬೆಳಗಾವಿಯ ಕೆಎಲ್‌ಇ ಜೀರಿಗೆ ಸಭಾಂಗಣದಲ್ಲಿ ನಡೆದ ಈ ಸಂಭ್ರಮದ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಕನ್ನಡಪ್ರಭದ ಬದ್ಧತೆಯನ್ನು, ನಾಡಿಗೆ ನೀಡಿದ ಕೊಡುಗೆಯನ್ನು ಮನದುಂಬಿ ಪ್ರಶಂಸಿಸಿದರು. ಬೆಳ್ಳಿಹಬ್ಬದ ಸಂಭ್ರಮದ ಹಿನ್ನೆಲೆಯಲ್ಲಿ ಬೆಳಗಾವಿ ಕನ್ನಡಪ್ರಭ ಆವೃತ್ತಿಯನ್ನು ಪ್ರತಿನಿಧಿಸುವ ವಿಶೇಷ ಲಕೋಟೆಯನ್ನು ಅಂಚೆ ಇಲಾಖೆಯ ಸಹಯೋಗದಲ್ಲಿ ಹೊರತರಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು. 

ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲೇ ಈ ರೀತಿಯ ಅಂಚೆ ಲಕೋಟೆ ಬಿಡುಗಡೆ ಇದೇ ಮೊದಲು. ಈ ವೇಳೆ ಅಂಚೆ ಇಲಾಖೆಯ ಬೆಳಗಾವಿ ವಿಭಾಗದ ಅಧೀಕ್ಷಕ ಎಸ್‌.ವಿಜಯನರಸಿಂಹ ಅವರು ಮಾತನಾಡಿ, ಮಾಧ್ಯಮವೊಂದರ ಸಹಯೋಗದಲ್ಲಿ ಅಂಚೆ ಲಕೋಟೆ ಲೋಕಾರ್ಪಣೆ ಮಾಡಿದ್ದು ದೇಶದಲ್ಲೇ ಇದೇ ಮೊದಲು. ಈ ಕಾರ್ಯಕ್ರಮಕ್ಕೆ ಅವಕಾಶ ನೀಡಿದ ಕನ್ನಡಪ್ರಭಕ್ಕೆ ಧನ್ಯವಾದಗಳು. ನಾವು ಈಗ ಬಿಡುಗಡೆ ಮಾಡಿದ ಲಕೋಟೆ ದೇಶದ ಎಲ್ಲ ಅಂಚೆ ಕಚೇರಿಯಲ್ಲೂ ದೊರೆಯುತ್ತವೆ. ಈ ಲಕೋಟೆಗಳಿಗಾಗಿ ಅಂಚೆಚೀಟಿ ಸಂಗ್ರಹಕಾರರು ಕಾಯುತ್ತಿದ್ದಾರೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ವಿಶ್ವಾಸಾರ್ಹತೆಯ ಪ್ರತೀಕ:ಕನ್ನಡಪ್ರಭ ಕನ್ನಡಿಗರ ವಿಶ್ವಾಸಾರ್ಹತೆಯ ಪ್ರತೀಕವಾಗಿದೆ. ನನ್ನನ್ನು ನಿರಂತರವಾಗಿ ತಿದ್ದಿತೀಡುವ ಕಾರ್ಯವನ್ನು ಕನ್ನಡಪ್ರಭ ನಿರಂತರವಾಗಿ ಮಾಡಿದೆ. ಒಂದೊಮ್ಮೆ ಕನ್ನಡಪ್ರಭ ಪತ್ರಿಕೆಯ ಯಾವುದೋ ಒಂದು ಸುದ್ದಿಯಲ್ಲಿ ನಾನು ಉಪಸ್ಥಿತಳಿದ್ದೆ ಎಂಬ ಉಲ್ಲೇಖವನ್ನು ಕಂಡು ಸಂಭ್ರಮಿಸುತ್ತಿದ್ದ ನಾನು, ಇಂದು ಕನ್ನಡಪ್ರಭ ಬೆಳಗಾವಿ ಆವೃತ್ತಿಯ ರಜತೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿರುವುದು ಸಂತಸ ತಂದಿದೆ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.