ಸಿಟಿ ರವಿ ಪ್ರಕರಣ ಸಿಐಡಿಗೆ ಒಪ್ಪಿಸಿದ ಸರ್ಕಾರ, ನೀವು ಹೇಳಿದಂತೆ ವರದಿ ಕೊಡ್ತಾರೆ ಎಂದ ವಿಪಕ್ಷ!
ಸಿಟಿ ರವಿ ಅಕ್ಷೇಪಾರ್ಹ ಪದ ಬಳಕೆ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ನೀಡಿದೆ. ಇದು ಬಿಜೆಪಿ ಹಾಗೂ ಜೆಡಿಎಸ್ ಆಕ್ರೋಶಕ್ಕೆ ಕಾರಣವಾಗಿದೆ. ಸಿಐಡಿ ತನಿಖೆಯಲ್ಲಿ ಸರ್ಕಾರ ಹೇಳಿದಂತೆ ವರದಿ ಬರೆದುಕೊಡುತ್ತಾರೆ ಎಂದು ಹೆಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬೆಂಗಳೂರು(ಡಿ.25) ವಿಧಾನ ಪರಿಷತ್‌ನಲ್ಲಿ ಬಿಜೆಪಿ ನಾಯಕ ಸಿಟಿ ರವಿ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ ಅನ್ನೋ ಪ್ರಕರಣ ರಾಜಕೀಯವಾಗಿ ಭಾರಿ ಹೋರಾಟಕ್ಕೆ ನಾಂದಿ ಹಾಡಿದೆ. ಇದೀಗ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿದೆ. ಇದು ವಿಪಕ್ಷಗಳ ಕಣ್ಣು ಕೆಂಪಾಗಿಸಿದೆ. ಆದರೆ ಸರ್ಕಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಸಿಐಡಿ ಅಧಿಕಾರಿಗಳು ಸರ್ಕಾರ ಹೇಳಿದಂತೆ ವರದಿ ಕೊಡುತ್ತಾರೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಏನೇ ತನಿಖೆ ಆದರೂ ಸಭಾಪತಿಯವರೇ ಮಾಡಬೇಕು, ಸಭಾಪತಿ ವ್ಯಾಪ್ತಿಯನ್ನ ಮೀರಿ ಹೋಗೋದು ಸರಿಯಲ್ಲ ಎಂದು ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.