ನಂದಿನಿ ಬೂತ್‌ನಲ್ಲಿ ಪೇಡಾ ತಿಂದು ಐಸ್‌ಕ್ರೀಂ ಸವಿದ ರಾಹುಲ್‌ ಗಾಂಧಿ

ಬೆಂಗಳೂರಿನ ಜೆಪಿ ನಗರದಲ್ಲಿ ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರು ನಂದಿನಿ ಬೂತ್‌ನಲ್ಲಿ ಪೇಡಾ ತಿಂದು, ಐಸ್‌ ಕ್ರೀಂ ಸವಿಯುವ ಮೂಲಕ ಕೆಎಂಎಫ್‌ಗೆ ಬೆಂಬಲ ಸೂಚಿಸಿದರು.

First Published Apr 16, 2023, 8:07 PM IST | Last Updated Apr 16, 2023, 8:07 PM IST

ಬೆಂಗಳೂರು (ಏ.16): ರಾಜ್ಯದ ಮಾರುಕಟ್ಟೆಗೆ ಅಮುಲ್‌ ಹಾಲು ತಂದಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರಿಗೆ ಸಾಥ್‌ ನೀಡುವ ನಿಟ್ಟಿನಲ್ಲಿ ರಾಹುಲ್‌ ಗಾಂಧಿ ಬೆಂಗಳೂರಿನ ಜೆ.ಪಿ. ನಗರದಲ್ಲಿ ನಂದಿನಿ ಪೇಡೆ ಮತ್ತು ಐಸ್ ಕ್ರೀಂ ಅನ್ನು ಸವಿದರು.

ಜೆಪಿ ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳು ಹಾಗೂ ಇತರೆ ರ್ಸಾಜನಿಕರೊಂದಿಗೆ ಆಯೋಜಿಸಲಾಗಿದ್ದ ಸಂವಾದ ಸಭೆಯಲ್ಲಿ ಭಾಗಗವಹಿಸಿ ಮಾತನಾಡಿದ ರಾಹುಲ್‌ ಗಾಂಧಿ ಅವರು, ಪಕ್ಕದಲ್ಲಿಯೇ ಇದ್ದ ಕೆಎಂಎಫ್ ಬೂತ್‌ಗೆ ತೆರಳಿ ಅಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪರಿಶೀಲನೆ ಮಾಡಿದರು. ನಂತರ ನಂದಿನಿ ಪೇಡೆಗಳನ್ನು ತಿಂದು ಬಾಯಿ ಚಪ್ಪರಿಸಿದರು. ನಂತರ, ನಂದಿನಿ ಐಎಸ್‌ಕ್ರೀಂಗಳನ್ನು ತಿಂದು, ಅಲ್ಲಿ ಜೊತೆಗಿದ್ದ ಹಲವರಿಗೆ ನಂದಿನಿ ಐಸ್‌ಕ್ರೀಂಗಳನ್ನು ಕೊಡಿಸಿದರು. 

ಬೂತ್‌ ಮಾಲೀಕನೊಂದಿಗೆ ಮಾತುಕತೆ ನಡೆಸಿದ ರಾಹುಲ್‌ ಗಾಂಧಿ ನಂದಿನಿ ಉತ್ಪನ್ನಗಳು ಎಲ್ಲಿಂದ ಬರುತ್ತವೆ. ಎಷ್ಟು ವರ್ಷದಿಂದ ನೀವು ಈ ಕೆಲಸ ಮಾಡುತ್ತಿದ್ದೀರಿ? ಎಮದು ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಂಗಡಿ ಮಾಲೀಕ ಬಳ್ಳಾರಿಯಿಂದ ನಂದಿನಿ ಉತ್ಪನ್ನಗಳು ಬರುತ್ತವೆ ಎಂದು ಮಾಹಿತಿ ನೀಡಿದರು. ಕೊನೆಗೆ ರಾಹುಲ್‌ ಗಾಂಧಿ ಅವರೊಂದಿಗೆ ಬೂತ್‌ನ ಮಾಲೀಕ ಫೋಟೋ ತೆಗೆಸಿಕೊಂಡು ಸಂತಸಪಟ್ಟರು. ಇನ್ನು ಅಂಗಡಿಯಿಂದ ಹೊರಡುವಾಗ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಂದಿನಿ ಅಂಗಡಿ ಮಾಲೀಕನಿಗೆ 1 ಸಾವಿರ ರೂ. ಹಣವನ್ನು ನೀಡಿದರು.