ಪಟ್ಟಣ ಯುದ್ಧ ಸೋತ ಮಗನಿಗೆ ಪಟ್ಟ ಕಟ್ಟಲು ದಳಪತಿ ಪ್ಲಾನ್!

ಜೆಡಿಎಸ್ ಪಕ್ಷದಲ್ಲಿ ಗೌಡರ ಕುಟುಂಬವನ್ನು ಹೊರತುಪಡಿಸಿ ಬೇರೆ ಯಾರೇ ಅಧ್ಯಕ್ಷರಾದರೂ ಪಕ್ಷಕ್ಕೆ ಹಿನ್ನಡೆಯಾಗಿದೆ. ಇದೀಗ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಕೈಬಿಟ್ಟ ನಂತರ ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಚಿಂತನೆ ನಡೆಯುತ್ತಿದೆ.

First Published Dec 2, 2024, 4:19 PM IST | Last Updated Dec 2, 2024, 4:19 PM IST

ಬೆಂಗಳೂರು (ಡಿ.02): ಕರ್ನಾಟಕದ ಏಕೈಕ ಪ್ರಾದೇಶಕ ಪಕ್ಷ ಜಾತ್ಯಾತೀತ ಜನದಾ ದಳ (ಜೆಡಿಸ್) ಪಕ್ಷಕ್ಕೆ ಗೌಡರ ಕುಟುಂಬವನ್ನು ಬಿಟ್ಟು ಬೇರೆ ಯಾರೇ ಅಧ್ಯಕ್ಷರಾದರೂ ಪಕ್ಷಕ್ಕೆ ಭಾರೀ ಹಿನ್ನಡೆ ಉಂಟಾಗಿ ಮಕಾಡೆ ಮಲಗಿದೆ. ಈ ಹಿನ್ನೆಲೆಯಲ್ಲಿ ಇದೀಗ ಸಿಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಕೈಬಿಟ್ಟ ಮಾಡಿದ ಬೆನ್ನಲ್ಲಿಯೇ ನಿಖಿಲ್ ಕುಮಾರಸ್ವಾಮಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಚಿಂತನೆ ಮುನ್ನೆಲೆಗೆ ಬಂದಿದೆ.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಪಕ್ಷವನ್ನು ಒಂದು ಚೌಕಟ್ಟಿನಲ್ಲಿ ಇಟ್ಟುಕೊಳ್ಳಲು ಗೌಡರ ಕುಟುಂಬದ ನಾಯಕತ್ವ ಅನಿವಾರ್ಯ. 2008ರ ಚುನಾವಣೆ ಸಂದರ್ಭದಲ್ಲಿ ಮೆರಾಜುದ್ದೀನ್ ಪಟೇಲ್ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಆಗಿದ್ದರು. ಆ ಚುನಾವಣೆಯಲ್ಲಿ ಜೆಡಿಎಸ್ 30 ಸೀಟುಗಳನ್ನ ಕಳೆದುಕೊಂಡು 28 ಸೀಟುಗಳಿಗೆ ಕುಸಿದಿತ್ತು. ಕಳೆದ ಚುನಾವಣೆ ಟೈಮ್ನಲ್ಲಿ ಸಿ.ಎಂ.ಇಬ್ರಾಹಿಂ ಅವರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲಾಗಿತ್ತು. ಆಗಲೂ 18 ಸೀಟುಗಳನ್ನ ಕಳೆದುಕೊಂಡ ಜೆಡಿಎಸ್ ಕೇವಲ 19 ಕ್ಷೇತ್ರಗಳಲ್ಲಿ ಮಾತ್ರ ಗೆದ್ದಿತ್ತು. 

ಅಂದರೆ, ಗೌಡರ ಕುಟುಂಬ ಹೊರತಾಗಿ ಬೇರೆಯವರು ರಾಜ್ಯಾಧ್ಯಕ್ಷರಾಗಿದ್ದಾಗ ನಡೆದ ಚುನಾವಣೆಗಳಲ್ಲಿ ಜೆಡಿಎಸ್ ದೊಡ್ಡ ಪೆಟ್ಟು ತಿಂದಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷದ ಈ ಇತಿಹಾಸ ನೋಡಿದರೆ, ಹೆಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಹೆಗಲಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟೋದು ಬಹುತೇಕ ಫಿಕ್ಸ್ ಆದಂತಿದೆ. ಆದರೆ, ಈಗಾಗಲೇ ಮೂರು ಚುನಾವಣೆಗಳಲ್ಲಿ ಸ್ಪರ್ಧಿಸಿ ನಿಖಿಲ್ ಸೋಲುಂಡರೂ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಬಗ್ಗೆ ಪಕ್ಷದ ಕಾರ್ಯಕರ್ತರು ಅಥವಾ ನಾಯಕರು ಹೇಗೆ ಸಹಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.