ಲಕ್ಷ್ಮೀ ಪಂಥಾಹ್ವಾನ, ಕೆಸರಿನ ಕಥೆ ಹೇಳಿದ ಕೇಸರಿಕಲಿ! ಸಿ.ಟಿ ರವಿಗೆ ಸಚಿವೆ ಆತ್ಮಸಾಕ್ಷಿಯ ಸವಾಲ್!

ಸಿ.ಟಿ. ರವಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವಾಗ್ಯುದ್ಧ ತೀವ್ರಗೊಂಡಿದ್ದು, ಹೆಬ್ಬಾಳ್ಕರ್ ಅವರು ರವಿಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡುವಂತೆ ಸವಾಲು ಹಾಕಿದ್ದಾರೆ. ರವಿ ಆಕ್ಷೇಪಾರ್ಹ ಪದ ಬಳಸಿಲ್ಲ ಎಂದಾದರೆ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದು ಹೆಬ್ಬಾಳ್ಕರ್ ಹೇಳಿದ್ದಾರೆ.

First Published Dec 25, 2024, 1:07 PM IST | Last Updated Dec 25, 2024, 1:07 PM IST

ಹದ್ದು ಮೀರಿದ ಮಾತು, ಹಳಿ ತಪ್ಪಿದ ಮಾತಿಗೆ ಹೊತ್ತಿಕೊಂಡದ್ದು ಕಿಚ್ಚು ರೊಚ್ಚಿನ ಜ್ವಾಲಾಮುಖಿ.  ಸಿ.ಟಿ ರವಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಆಣೆ ಪ್ರಮಾಣದ ಸವಾಲ್..! ಸಿ.ಟಿ ರವಿ Vs ಲಕ್ಷ್ಮೀ ಹೆಬ್ಬಾಳ್ಕರ್ ಪ್ರಕರಣವೀಗ ಸಿಐಡಿ ಮೆಟ್ಟಿಲೇರಿದೆ.. ಇದು ಕಾನೂನು ಬಾಹಿರ ಅಂತ ಬಿಜೆಪಿ ಆರೋಪಿಸಿದ್ದೇಕೆ..? ಬಿಜೆಪಿ ಆರೋಪಕ್ಕೆ ಹೋಮ್ ಮಿನಿಸ್ಟರ್ ಕೊಟ್ಟ ಉತ್ತರವೇನು..? ವಿಧಾನ ಪರಿಷತ್ ಸದನದೊಳಗೆ ನಡೆದ ಘಟನೆ ಪೊಲೀಸ್ ತನಿಖೆಯ ವ್ಯಾಪ್ತಿಗೆ ಬರುತ್ತಾ..?  

ಆಕ್ಷೇಪಾರ್ಹ ಪದ ಬಳಸಿಲ್ಲ ಅಂದ್ರೆ ಧರ್ಮಸ್ಥಳ ಮಂಜುನಾಥೇಶ್ವರನ ಸನ್ನಿಧಾನಕ್ಕೆ ಬನ್ನಿ. ನಾನೂ ಕುಟುಂಬ ಸಮೇತ ಬರುವೆ. ನೀವೂ ಬನ್ನಿ ಆಣೆ ಪ್ರಮಾಣ ಮಾಡೋಣ ಎಂದು ಸಿ.ಟಿ. ರವಿ ಅವರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೇರವಾಗಿ ಸವಾಲು ಹಾಕಿದ್ದಾರೆ

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾರಿಗೂ ಸವಾಲು ಹಾಕಲ್ಲ, ಜವಾಬ್ ಕೇಳುತ್ತಿಲ್ಲ. ಈ ಪ್ರಕರಣದಲ್ಲಿ ರಾಜಕಾರಣ ಸ್ಟಂಟ್ ಬೇಕಿಲ್ಲ. ಮಾಡಬಾರದ್ದನ್ನು ಮಾಡಿ ಬಿಜೆಪಿ ನಾಯಕರೇ ವಿಜೃಂಭಿಸುತ್ತಿದ್ದಾರೆ. ಆಡಬಾರದ್ದನ್ನು ಆಡಿರುವ ಸಿ.ಟಿ. ರವಿಗೆ ಹೂವು, ಹಾರ, ತೂರಾಯಿ ಹಾಕಿಸಿಕೊಳ್ತಿದ್ದಾರೆ, ಪಟಾಕಿ ಹೊಡಿಸಿಕೊಳ್ತಿದ್ದಾರೆ. ಅದಕ್ಕಾಗಿ ನಾನು ಇಷ್ಟೆ ಹೇಳೋದು ಎಂದರು.

ಧರ್ಮಸ್ಥಳ ಕ್ಷೇತ್ರದ ಮಂಜುನಾಥನನ್ನು ನಾನು ನಂಬುತ್ತೇನೆ. ದೇವಾನು ದೇವತೆಗಳನ್ನು ನಾನು ನಂಬುತ್ತೇನೆ. ಸಿ‌.ಟಿ. ರವಿ ಅವರ ಚಿಕ್ಕಮಗಳೂರಿಗೆ ಧರ್ಮಸ್ಥಳ ತುಂಬ ಹತ್ತಿರಯಿದೆ. ನೀವೂ ದೇವರನ್ನು ನಂಬುತ್ತೀರಿ. ದತ್ತಮಾಲೆ ಹಾಕುತ್ತೀರಿ. ದತ್ತ ಪೀಠಕ್ಕೆ ಹೋಗುತ್ತೀರಿ. ಆ ಪದ ಬಳಸಿಲ್ಲ ಎಂದರೆ ಕುಟುಂಬ ಸಮೇತ ಧರ್ಮಸ್ಥಳಕ್ಕೆ ಬನ್ನಿ, ನಾನೂ ಬರುತ್ತೇನೆ ಎಂದು ಹೆಬ್ಬಾಳಕರ ಸವಾಲು ಹಾಕಿದರು.