ಕಿಂಗ್‌ ಮೇಕರ್‌ ಕನಸು ಭಗ್ನಗೊಂಡು ಕುಮಾರಸ್ವಾಮಿ ಹತಾಶೆ ಕೂಪದಲ್ಲಿ ವಿಲವಿಲ ಒದ್ದಾಡುತ್ತಿದ್ದಾರೆ: ಕಾಂಗ್ರೆಸ್‌ ಟೀಕೆ

ಕಿಂಗ್‌ ಮೇಕರ್‌ ಕನಸು ಕಂಡಿದ್ದ ಕುಮಾರಸ್ವಾಮಿ ಅವರಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ನಿದ್ರೆ-ನೆಮ್ಮದಿ ಹಾರಿ ಹೋಗಿದೆ‌. ಹತಾಶೆಯ ಕೂಪದಲ್ಲಿ ಬಿದ್ದು ವಿಲ ವಿಲ ಒದ್ದಾಡುತ್ತಿದ್ದಾರೆ.

First Published Aug 6, 2023, 7:21 PM IST | Last Updated Aug 6, 2023, 7:21 PM IST

ಬೆಂಗಳೂರು (ಆ.06): ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಹೆಚ್.ಡಿ. ಕುಮಾರಸ್ವಾಮಿಯವರ ನಿದ್ರೆ-ನೆಮ್ಮದಿ ಹಾರಿ ಹೋಗಿದೆ‌. ಹತಾಶೆಯ ಕೂಪದಲ್ಲಿ ಬಿದ್ದು ವಿಲ ವಿಲ ಒದ್ದಾಡುತ್ತಿರುವ ಕುಮಾರಸ್ವಾಮಿ ನಮ್ಮ ಸರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡುವುದನ್ನೇ ಪೂರ್ಣಕಾಲಿಕ ಉದ್ಯೋಗ ಮಾಡಿಕೊಂಡಿದ್ದಾರೆ. ಆರೋಪ ಮಾಡಿದರೆ ಅದನ್ನು ಸಾಬೀತುಪಡಿಸಲಿ. ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸುವುದ್ಯಾಕೆ? ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಸಾಮಾಜಿಕ ಜಾಲತಾಣದ ಮೂಲಕ ಟೀಕೆ ಮಾಡಿದ್ದಾರೆ.

ಕುಮಾರಸ್ವಾಮಿಯವರು ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡಲು ಒಮ್ಮೆ ಪೆನ್‌ಡ್ರೈವ್ ತೋರಿಸುತ್ತಾರೆ ಮತ್ತೊಮ್ಮೆ ಸಿಡಿ ತೋರಿಸುತ್ತಾರೆ. ನಿಜವಾಗಿಯೂ ಅವರ ಬಳಿ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಕುಮಾರಸ್ವಾಮಿಯವರ ಕೈಯನ್ನು ನಾವ್ಯಾರು ಕಟ್ಟಿ ಹಾಕಿಲ್ಲ. ಅವರು ಪದೇ ಪದೇ ತೋಳ ಬಂತು ತೋಳದ ಕಥೆಯ ಕಥಾನಾಯಕನ ರೀತಿ ವರ್ತಿಸಿದರೆ ಹೆದರುವರು ಯಾರು? ಚುನಾವಣೆಗೂ ಮುನ್ನ 'ಕಿಂಗ್ ಮೇಕರ್' ಆಗುವ ಕನಸು ಕಂಡಿದ್ದರು. ಆದರೆ ಜನರು ಚುನಾವಣೆಯಲ್ಲಿ 'ಕಿಂಗ್ ಮೇಕರ್' ಕನಸನ್ನು ನುಚ್ಚುನೂರು ಮಾಡಿದರು. ಆದ್ದರಿಂದ ಕನಸು ಭಗ್ನಗೊಂಡ ಕುಮಾರಸ್ವಾಮಿ ಭಗ್ನಪ್ರೇಮಿಯಂತೆ ವ್ಯಾಘ್ರರಾಗಿದ್ದಾರೆ. ಹಾಗಾಗಿ ಬಾಯಿಗೆ ಬಂದಂತೆ ನಮ್ಮ ಸರ್ಕಾರದ ವಿರುದ್ಧ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಾ ತಿರುಗಾಡುತ್ತಿದ್ದಾರೆ.

Video Top Stories