ಕರ್ನಾಟಕ ಕುರುಕ್ಷೇತ್ರ: ಒಂದೇ ಹಂತದಲ್ಲಿ ರಾಜ್ಯದಲ್ಲಿ ಚುನಾವಣೆ?

ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಶನಿವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಒಂದೇ ಹಂತದಲ್ಲಿ 224 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂಬ ಮುನ್ಸೂಚನೆ ನೀಡಿದ್ದಾರೆ. 

First Published Mar 11, 2023, 7:25 PM IST | Last Updated Mar 11, 2023, 7:25 PM IST

ಬೆಂಗಳೂರು (ಮಾ.11): ಕರ್ನಾಟಕದಲ್ಲಿ ಮುಂಬರುವ ವಿಧಾನಸಭೆ ಚುನಾವಣೆ 2023ಗೆ ಚುನಾವಣಾ ಆಯೋಗ ನಡೆಸಿರುವ ಸಿದ್ಧತೆಯ ಕುರಿತು ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ವಿಕಾಸಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಹಲವಾರು ಮಾಹಿತಿ ಸಂಗ್ರಹ ಮಾಡಿದ್ದೇವೆ. ಮೇ. 24ರ ಒಳಗಾಗಿ ಹೊಸ ಸರ್ಕಾರ ರಚನೆಯಾಗಬೇಕಿದೆ. ಕರ್ನಾಟಕ ರಾಜ್ಯದಲ್ಲಿ ಒಟ್ಟು 5.21 ಕೋಟಿ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು. ಗ್ರಾಮಾಂತರದಲ್ಲಿ ಈ ಬಾರಿ ಶೇ. 80ರಷ್ಟು ಹೆಚ್ಚಿನ ಮತದಾನವಾಗುವ ನಿರೀಕ್ಷೆ ಇದೆ. ಇನ್ನು ಚುನಾವಣಾ ಸಮಾವೇಶಗಳಿಗೆ ಆನ್‌ಲೈನ್‌ನಲ್ಲೂ ಅನುಮತಿಗೆ ಅರ್ಜಿ ಸಲ್ಲಿಸಬಹುದು. ನಾಮಪತ್ರ ಆನ್‌ಲೈನ್‌ನಲ್ಲೂ ಸಲ್ಲಿಸುವ ಅವಕಾಶವಿದೆ ಎಂದು ಹೇಳಿದ್ದಾರೆ. 2.62 ಕೋಟಿ ಪುರುಷ ಮತದಾರರು ರಾಜ್ಯದಲ್ಲಿದ್ದರೆ, ಮಹಿಳಾ ಮತದಾರರು 2.59 ಕೋಟಿ ಇದ್ದಾರೆ. ಅದರೊಂದಿಗೆ ರಾಜ್ಯದಲ್ಲಿ 100 ವರ್ಷ ಮೇಲ್ಪಟ್ಟ 16, 796 ಮತದಾರರಿದ್ದಾರೆ. ಕಳೆದ ಬಾರಿ ನಗರ ಪ್ರದೇಶದಲ್ಲಿ ಕಡಿಮೆ ಮತದಾನವಾಗಿತ್ತು. ಈ ಬಾರಿ ಮತದಾನ ಪ್ರಮಾಣವನ್ನು ಏರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ. ಈ ನಡುವೆ ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸುವಂತೆ ಮನವಿ ಬಂದಿದ್ದು, ಈ ಕುರಿತಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ 4,699 ತೃತೀಯ ಲಿಂಗಿ ಮತದಾರರಿದ್ದಾರೆ. 9.17 ಲಕ್ಷ ಮಂದಿ ಇದೇ ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ. ಇನ್ನೂ 80 ವರ್ಷಕ್ಕಿಂತ ಹೆಚ್ಚಿನ 12.15 ಲಕ್ಷ ಮತದಾರರಿದ್ದರೆ. 5.55 ಲಕ್ಷ ವಿಕಲಚೇತನ ಮತದಾರರಿದ್ದಾರೆ. ಮೊದಲ ಬಾರಿಯ ಮನೆಯಲ್ಲೇ‌ ಮತದಾನ ಮಾಡುವ ಅವಕಾಶವನ್ನೂ ಈ ಬಾರಿ ನೀಡಲಾಗುತ್ತದೆ. 80 ವರ್ಷ ಮೇಲ್ಪಟ್ಟಿರುವ ಮತ್ತು ವಿಕಲಚೇತನರಿಗೆ ಮನೆಯಲ್ಲೇ ಮತದಾನದ ‌ಮಾಡುವ ಅವಕಾಶ ಇರಲಿದೆ. ಮತಗಟ್ಟೆಗೆ ಬರಲು ಸಾದ್ಯವಾಗದವರಿಗೆ ವಯೋವೃದ್ದರು, ಅಂಗವಿಕಲರಿಗೆ ಮನೆಯಲ್ಲೇ ವೋಟಿಂಗ್ ಸೌಲಭ್ಯ ಇರಲಿದೆ ಎಂದು ಮಾಹಿತಿ ನೀಡಿದರು.