ಕರ್ನಾಟಕ ಉಪ ಚುನಾವಣೆ ಫಲಿತಾಂಶ; ಅಭ್ಯರ್ಥಿಗಳ ಗೆಲುವಿಗಿಂತ ಮುಖ್ಯವಾಗಿ ದೊಡ್ಡವರ ತಲೆದಂಡ ಚಿಂತೆ!
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದಿಂದ ದೊಡ್ಡ ರಾಜಕೀಯ ಬದಲಾವಣೆಗಳು ಸಂಭವಿಸಬಹುದು. ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವರ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವಿನ ಪೈಪೋಟಿ, ಡಿ.ಕೆ. ಶಿವಕುಮಾರ್ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ. ಶಿಗ್ಗಾಂವಿ ಮತ್ತು ಸಂಡೂರಿನ ಫಲಿತಾಂಶಗಳು ಕೂಡ ಪ್ರಮುಖ ನಾಯಕರ ರಾಜಕೀಯದ ಮೇಲೆ ಪ್ರಭಾವ ಬೀರಲಿವೆ.
ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶಕ್ಕೆ ಇನ್ನೂ ಒಂದು ದಿನ ಕಾಯಬೇಕಿದೆ. ಆದರೆ, ಚನ್ನಪಟ್ಟಣದಲ್ಲಿ ರಿಸಲ್ಟ್ ಏನೇ ಬಂದರೂ ದೊಡ್ಡ ರಾಜಕೀಯ ಬದಲಾವಣೆಯಂತೂ ಆಗುತ್ತದೆ. ಮಾಜಿ ಶಸಕ ಸಿ.ಪಿ. ಯೋಗೇಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿಗೆ ಚನ್ನಪಟ್ಟಣದ ಶಾಸಕ ಪಟ್ಟ ಬೇಕು. ಇಷ್ಟಕ್ಕೆ ಮಾತ್ರವೇ ಬೊಂಬೆನಾಡಿನ ರಣಾಂಗಣ ಸೀಮಿತವಾಗಿರಲಿಲ್ಲ. ಇವರಬ್ಬರ ಸೋಲು-ಗೆಲುವು ಮತ್ತಿಬ್ಬರು ದಿಗ್ಗಜ ನಾಯಕರ ಪಾಲಿಟಿಕ್ಸ್ ಮೇಲೆ ಪ್ರಭಾವ ಬೀರುತ್ತದೆ.
ಒಂದು ಕಡೆ ಕನಕಪುರ ಬಂಡೆ ಖ್ಯಾತಿಯ ಡಿಸಿಎಂ ಡಿ.ಕೆ. ಶಿವಕುಮಾರ್ ಗಟ್ಟಿಯಾಗೋದಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಅವರಿಗೆ ವಿಜಯಮಾಲೆ ಒಲಿಯಲೇಬೇಕು. ಮತ್ತೊಂದೆಡೆ ದಳಪತಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಶಕ್ತಿ ಬೇಕು ಎಂದರೆ ಅವರ ಪುತ್ರನಿಗೆ ಗೆಲವು ಪ್ರಾಪ್ತಿಯಾಗಲೇಬೇಕು. ಇಲ್ಲವಾದರೆ, ಇಬ್ಬರಿಗೂ ಮುಂದೆ ಕಾದಿರೋದು ಮಹಾ ಆಪತ್ತು. ಒಬ್ಬರಿಗೆ ಸಿಎಂ ಕನಸಿನ್ನು ಈಡೇರಿಸಿದರೆ, ಮತ್ತೊಬ್ಬರಿಗೆ ತನ್ನ ನಂತರದ ರಾಜಕೀಯ ರಾಯಭಾರಿ ಹುಟ್ಟಲಿದ್ದಾರೆ.
ಇದು ಚನ್ನಪಟ್ಟಣ ಕಥೆಯಾದರೆ, ಶಿಗ್ಗಾಂವಿ ಹಾಗೂ ಸಂಡೂರಿನ ಫಲಿತಾಂಶವೂ ಕೆಲವು ದಿಗ್ಗಜರ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ. ಸಂಡೂರು ಹಾಗೂ ಶಿಗ್ಗಾಂವಿ ಚುನಾವಣಾ ರಿಸೆಲ್ಟ್ ಕೇವಲ ಅಭ್ಯರ್ಥಿಗಳಿಗೆ ಮಾತ್ರವೇ ಇಂಪಾರ್ಟೆಂಟ್ ಆಗಿ ಉಳಿದಿಲ್ಲ. ಕೆಲವು ಪ್ರಮುಖ ನಾಯಕರ ಮುಂದಿನ ರಾಜಕೀಯದ ಮೇಲೂ ಇಲ್ಲಿನ ಸೋಲು, ಗೆಲುವಿನ ಫ್ಯಾಕ್ಟರ್ ಪ್ರಭಾವ ಬೀರೋ ಸಾಧ್ಯತೆಯಿದೆ.