ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾಂವಿ ಉಪ ಚುನಾವಣಾ ಬಿಗ್ ಅಪ್ಡೇಟ್ಸ್; ಗೆಲ್ಲೋರಾರು ನಿಮಗೇ ತಿಳಿಯುತ್ತೆ!

ಕರ್ನಾಟಕದಲ್ಲಿ ಮೂರು ಕ್ಷೇತ್ರಗಳಲ್ಲಿ ಮಾತಿನ ಕಿಚ್ಚು ಭುಗಿಲೆದ್ದಿದೆ. ಸಂಡೂರಿನಲ್ಲಿ ರೆಡ್ಡಿ ಬ್ರದರ್ಸ್ ಮತ್ತು ಸಿದ್ದರಾಮಯ್ಯ ನಡುವೆ ಮಾತಿನ ಯುದ್ಧ, ಚನ್ನಪಟ್ಟಣದಲ್ಲಿ ದೊಡ್ಡಗೌಡರು ಮತ್ತು ಡಿ.ಕೆ. ಸುರೇಶ್ ನಡುವೆ ವಾಗ್ಯುದ್ಧ, ಶಿಗ್ಗಾಂವಿಯಲ್ಲಿ ಬಿಜೆಪಿಗೆ ಸಿಕ್ಕ ಬ್ರಹ್ಮಾಸ್ತ್ರ - ಇವೆಲ್ಲವೂ ಚುನಾವಣಾ ಕಣದಲ್ಲಿ ಹೊಸ ತಿರುವುಗಳನ್ನು ಸೃಷ್ಟಿಸುತ್ತಿವೆ.

First Published Nov 10, 2024, 4:37 PM IST | Last Updated Nov 10, 2024, 4:37 PM IST

ರಾಜ್ಯದ ಮಿನಿ ಸಮರಗಳ ಬಿಗ್ ಅಪ್ಡೇಟ್ಸ್ ಇಲ್ಲಿದೆ ನೊಡಿ. ಮಾತು..ಮಾತುಗಳಿಂದಲೇ ಮಿನಿ ಸಮರ ಮಹಾ ಸಮರವಾಗ್ತಿದೆ.  ಮೂರು ಕ್ಷೇತ್ರಗಳಲ್ಲೀಗ ಮಾತಿನ ಕಿಚ್ಚು ಧಗಧಹಿಸ್ತಿದೆ. ಬೊಂಬೆನಾಡಲ್ಲಿ ಗೌಡರು ಹೇಳಿದ ಕೊತ್ವಾಲ್ ಕಥೆಗೆ ಬಂಡೆ ಬ್ರದರ್ಸ್ ಬೆಂಕಿಯುಗಳುತ್ತಿದಾರೆ.  ಡಿ ವರ್ಸಸ್ ಡಿ ಗುದ್ದಾಂ ಗುದ್ದಿ ಅಲ್ಲಿ ಆರಂಭವಾಗಿದೆ. ಇತ್ತ ಸಂಡೂರಲ್ಲಿ ಬಾಯಾರಿಕೆ.. ಬೆದರಿಕೆ.. ಪಾಪದ ಕೊಡ ಅಂತೇಳಿ ಗಾಲಿ ಟಗರು ಮಧ್ಯೆ ಮಾತಿನ ಯುದ್ಧ ಶುರುವಾಗಿದೆ. ಈ ಮಧ್ಯೆ ಶಿಗ್ಗಾಂವಿ ಶಿಕಾರಿಗೆ ಇಳಿದಿರೋ ಕೇಸರಿ ಕಲಿಗಳ ಕೈಗೆ ಒಂದು ಬ್ರಹ್ಮಾಸ್ತ್ರ ಸಿಕ್ಕಿದೆ. ಮೂರು ಕುರುಕ್ಷೇತ್ರದ ಮೂರು ಮಾತಿನ ಹಿಂದಿರೋ ಮಹಾಮರ್ಮವನ್ನ ನಿಮ್ಮ ಮುಂದೆ ತೆರೆದಿಡ್ತೀವಿ. ಇದೇ ಇವತ್ತಿನ ಸುವರ್ಣ ಸ್ಪೆಷಲ್  ಮದವೇರಿದೆ ಮೈದಾನ.

ಒಂದು ಅವಧಿಯಲ್ಲಿ ಕಾಂಗ್ರೆಸ್ ಅನ್ನು ಹೇಳ ಹೆಸರಿಲ್ಲದಂತೆ ಮಾಡಲು ಮುಂದಾಗಿದ್ದ ರೆಡ್ಡಿ ಬ್ರದರ್ಸ್ ಮೇನ್ ಪಿಲ್ಲರ್ ಜನಾರ್ಧನ ರೆಡ್ಡಿ ಇದೀಗ ಪುನಃ ರಾಜ್ಯ ರಾಜಕಾರಣಕ್ಕೆ ಬಿಜೆಪಿಯಿಂದ ಮರು ಎಂಟ್ರಿ ಕೊಟ್ಟಿದ್ದಾರೆ. ಇದೀಗ ಪುನಃ ಕಾಂಗ್ರೆಸ್‌ನ ಪಿಲ್ಲರ್ ಟಗರು ಖ್ಯಾತಿಯ ಸಿಎಂ ಸಿದ್ದರಾಮಯ್ಯಗೆ ದೊಡ್ಡದಾಗೇ ಸವಾಲು ಹಾಕುತ್ತಿದ್ದಾರೆ. ರೆಡ್ಡಿ ಬ್ರದರ್ಸ್‌ಗಳ ಪೈಕಿ ಒಬ್ಬಂಟಿಯಾಗಿದ್ದ ರಾಮುಲು ಅವರಿಗೆ ಟಗರು ಚೆನ್ನಾಗಿಯೇ ಗುಮ್ಮಿದ್ದರು. ಆದರೆ, ಇದೀಗ ಮತ್ತೆ ರೆಡ್ಡಿ ಮತ್ತು ರಾಮುಲು ಒಂದಾಗಿ ಸಂಡೂರಿನಲ್ಲಿ ಟಗರು ಗುಮ್ಮೋದನ್ನು ಕಟ್ಟಿಹಾಕಲು ಮುಂದಾಗಿದ್ದಾರೆ.

ಇದು ಸಂಡೂರು ಕಥೆಯಾದ್ರೆ, ಚನ್ನಪಟ್ಟಣ ಕಥೆ ಇನ್ನೂ ಡಿಫರೆಂಟ್. ಚನ್ನಪಟ್ಟಣದಲ್ಲಿ ಹತ್ತಿಕೊಂಡಿರೋ ಕಣ್ಣೀರ ಕಿಚ್ಚು ನಂದೋ ಹಾಗೆ ಕಾಣಿಸ್ತಿಲ್ಲ. ನಿಖಿಲ್ ಕಣ್ಣಿನಿಂದ ಜಾರಿದ ನೀರಿಗೆ ಕೈ ನಾಯಕರು ವ್ಯಂಗ್ಯವಾಡಿದ್ದರು. ಆ ವ್ಯಂಗ್ಯವನ್ನ ಕಂಡು ನಿಗಿ ನಿಗಿ ಕೆಂಡವಾದ ದೊಡ್ಡಗೌಡರು ಕನಕಪುರ ಬಂಡೆಗೆ ಮಾತಿನ ಏಟು ಕೊಟ್ಟಿದ್ದಾರೆ. ಕೊತ್ವಾಲ್ ರಾಮಚಂದ್ರ.. 100 ರೂ. ಕೆಲಸದ ಕಥೆ ಹೇಳಿದ್ದಾರೆ. ಅಷ್ಟೇ.. ಅಣ್ಣನ ಪರವಾಗಿ ದೊಡ್ಡಗೌಡರ ವಿರುದ್ಧ ತಮ್ಮ ಡಿ.ಕೆ. ಸುರೇಶ್ ದಂಡೆತ್ತಿ ಬಂದಾಗಿದೆ. ಈ ವಿಚಾರವಾಗಿ ಬಿಜೆಪಿ ಶಾಸಕರೊಬ್ಬರು ಕೂಡ ಬಂಡೆ ಬ್ರದರ್ಸ್ ಜೊತೆ ನಿಂತಿದ್ದಾರೆ.

ಮತ್ತೊಂದೆಡೆ ಚನ್ನಪಟ್ಟಣದಿಂದ ಶಿಗ್ಗಾಂವಿಗೆ ಬಂದ್ರೆ, ಅಲ್ಲಿ ಬಿಜೆಪಿ ಕೈಗೆ ಒಂದು ಬ್ರಹ್ಮಾಸ್ತ್ರ ಸಿಕ್ಕಿದೆ. ಅದೊಂದು ಬ್ರಹ್ಮಾಸ್ತ್ರ ಕೇಸರಿ ನಾಯಕರ ಕೈ ಸೇರಿದೆ. ಶಿಗ್ಗಾಂವಿ ಚುನಾವಣಾ ಕಣದಲ್ಲಿ ಅದ್ರಿಂದ ಬಿಜೆಪಿಗೆ ಭರ್ಜರಿ ಲಾಭವಾಗೋ ನಿರೀಕ್ಷೆಯಿದೆ.