ಕಾಂಗ್ರೆಸ್ ಸೇರಲು ತಂತ್ರಗಾರ ಪ್ರಶಾಂತ್ ಕಿಶೋರ್ ನಿರಾಕರಿಸಿದ್ದೇಕೆ..?
ಕಾಂಗ್ರೆಸ್ ಪಕ್ಷ ಸೇರುವಂತೆ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ನೀಡಿದ್ದ ಆಹ್ವಾನವನ್ನು ದೇಶದ ಪ್ರಸಿದ್ಧ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (Prashant Kishore) ನಿರಾಕರಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಸೇರುವಂತೆ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ಅವರು ನೀಡಿದ್ದ ಆಹ್ವಾನವನ್ನು ದೇಶದ ಪ್ರಸಿದ್ಧ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (Prashant Kishore) ನಿರಾಕರಿಸಿದ್ದಾರೆ. ಇದರಿಂದಾಗಿ, 2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ರಾಜಕೀಯ ತಂತ್ರಗಾರಿಕೆಯನ್ನು ಪ್ರಶಾಂತ್ ಕಿಶೋರ್ ನಿರ್ವಹಿಸಿ, ಪಕ್ಷವನ್ನು ಪುಟಿದೇಳಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ನಾಯಕತ್ವಕ್ಕೆ ಪ್ರಶಾಂತ್ ಕಿಶೋರ್ ಪ್ರಾತ್ಯಕ್ಷಿಕೆ ನೀಡಿದ್ದರು. ಆ ವೇಳೆ ಅವರಿಗೆ ಪಕ್ಷ ಸೇರುವಂತೆ ಆಹ್ವಾನ ನೀಡಲಾಗಿತ್ತು. ಪ್ರಶಾಂತ್ ಅವರು ಈ ಆಹ್ವಾನದ ಬಗ್ಗೆ ಉತ್ಸುಕರಾಗಿದ್ದರು. ಆದರೆ, ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಜತೆ ಪ್ರಶಾಂತ್ ಅವರ ಸಂಸ್ಥೆ ಐ-ಪ್ಯಾಕ್ ಚುನಾವಣಾ ತಂತ್ರಗಾರಿಕೆ ಒಪ್ಪಂದ ಮಾಡಿಕೊಂಡಿತ್ತು. ಇದನ್ನು ಕಾಂಗ್ರೆಸ್ ನಾಯಕತ್ವ ಹಿತಾಸಕ್ತಿಗಳ ವೈರುಧ್ಯವಾಗಿ ಕಂಡಿತ್ತು. ಇದಕ್ಕೆ ಕಾಂಗ್ರೆಸ್‌ನಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಇದೇ ವೇಳೆ ಕಾಂಗ್ರೆಸ್‌ನಲ್ಲಿ ಹೆಚ್ಚು ಸ್ವತಂತ್ರ ನಿರ್ಧಾರ ಕೈಗೊಳ್ಳುವ ಅಧಿಕಾರಗಳನ್ನು ತಮಗೆ ನೀಡಬೇಕು ಎಂದು ಕಿಶೋರ್ ಬಯಸಿದ್ದರು. ಆದರೆ ಪಕ್ಷವು ಅದಕ್ಕೆ ಒಪ್ಪಲಿಲ್ಲ. ಹೀಗಾಗಿ ಅವರು ಕಾಂಗ್ರೆಸ್ ಸೇರದಿರುವ ನಿರ್ಧಾರ ಕೈಗೊಂಡರು ಎಂದು ಮೂಲಗಳು ಹೇಳಿವೆ.