Raichur: ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಕಾಂಗ್ರೆಸ್-ಜೆಡಿಎಸ್ ರಾಜಕೀಯ
ಜಿಲ್ಲೆಯ ಸಿಂಧನೂರಿನಲ್ಲಿ ನೂತನ ರಂಗಮಂದಿರಕ್ಕೆ ಪುನೀತ್ ರಾಜ್‌ಕುಮಾರ್ ಹೆಸರಿಡಲು ಗಲಾಟೆ ನಡೆಯುತ್ತಿದ್ದು, ಅಪ್ಪು ಪುತ್ಥಳಿ ಮೆರವಣಿಗೆ ವೇಳೆ ಜೆಡಿಎಸ್ ಕಾರ್ಯಕರ್ತರು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ.
ರಾಯಚೂರು (ಮಾ.15): ಜಿಲ್ಲೆಯ ಸಿಂಧನೂರಿನಲ್ಲಿ ನೂತನ ರಂಗಮಂದಿರಕ್ಕೆ ಪುನೀತ್ ರಾಜ್‌ಕುಮಾರ್ ಹೆಸರಿಡಲು ಗಲಾಟೆ ನಡೆಯುತ್ತಿದ್ದು, ಅಪ್ಪು ಪುತ್ಥಳಿ ಮೆರವಣಿಗೆ ವೇಳೆ ಜೆಡಿಎಸ್ ಕಾರ್ಯಕರ್ತರು ಪೊಲೀಸರ ಮಧ್ಯೆ ವಾಗ್ವಾದ ನಡೆದಿದೆ. ಪಿಎಸ್‌ಐ ಮಣಿಕಂಠ ಕಾಲರ್ ಹಿಡಿದು ಸಿಂಧನೂರು ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಪುತ್ರ ಅಭಿಷೇಕ ನಾಡಗೌಡ ತಳ್ಳಿದ್ದು, ಇದಕ್ಕೆ ಜೆಡಿಎಸ್ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಸಿಂಧನೂರು ನಗರದ ಸುಕಾಲಪೇಟೆ ರಸ್ತೆಯಲ್ಲಿ ನಿರ್ಮಾಣವಾಗಿರುವ ರಂಗಮಂದಿರಕ್ಕೆ ಪುನೀತ್ ರಾಜಕುಮಾರ್ ಹೆಸರಿಡಲು ಶಾಸಕರ ಪುತ್ರ ಒತ್ತಾಯ ಮಾಡಿದ್ದು, ಕಾಂಗ್ರೆಸ್ ಕೈಯಲ್ಲಿರುವ ನಗರಸಭೆಯಿಂದ ಅಪ್ಪು ಹೆಸರಿಡಲು ವಿರೋಧವಾಗಿದೆ.
ಹೀಗಾಗಿ ಸ್ಥಳೀಯ ಕಲಾವಿದರ ಹೆಸರಿಡಲು ಕಾಂಗ್ರೆಸ್ ಒತ್ತಾಯ ಮಾಡಿದ್ದು, ನಗರದ ಎಪಿಎಂಸಿಯಿಂದ ರಂಗಮಂದಿರದವರೆಗೆ ಅಪ್ಪು ಪುತ್ಥಳಿ ಮೆರವಣಿಗೆ ವೇಳೆ ಗಲಾಟೆ ನಡೆದಿದೆ. ಕರ್ತವ್ಯನಿರತ ಪಿಎಸ್‌ಐ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರ ಪುತ್ರ ಸೇರಿ 15 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪುನೀತ್ ರಾಜಕುಮಾರ್ ಪುತ್ಥಳಿ ಪ್ರತಿಷ್ಟಾಪನೆ ವಿಚಾರ ನಡೆದ ಗಲಾಟೆಯಲ್ಲಿ ಅನುಮತಿ ಇಲ್ಲದೆ ಅಪ್ಪು ಪುತ್ಥಳಿ ಮೆರವಣಿಗೆ, ಪ್ರತಿಷ್ಟಾಪನೆಗೆ ಯತ್ನಿಸಿದ್ದು, ಮೆರವಣಿಗೆ ವೇಳೆ ಮಾತಿನ ಚಕಮಕಿ ನಡೆದು ಪಿಎಸ್‌ಐ ಮೇಲೆ ಹಲ್ಲೆ ಮಾಡಲಾಗಿದ್ದು, ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.