ಅನುದಾನ ಕೇಳಿದ ಶಾಸಕರಿಗೆ ಪಂಗನಾಮ; ಹಾರಿಕೆ ಉತ್ತರ ಕೊಟ್ಟ ಸಿಎಂ ಸಿದ್ದರಾಮಯ್ಯ!

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅನುದಾನದ ಕೊರತೆ ಬಗ್ಗೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಅನುದಾನ ಕೇಳಿದ ಶಾಸಕರ ಬೇಡಿಕೆಯನ್ನು ತಳ್ಳಿಹಾಕಿದರು ಹಾಗೂ ಕೆಲವು ಶಾಸಕರನ್ನು ಗೇಲಿ ಮಾಡಿದರು.

First Published Dec 18, 2024, 7:23 PM IST | Last Updated Dec 18, 2024, 7:24 PM IST

ಕಾಂಗ್ರೆಸ್ ಶಾಸಕರ ಸಮಸ್ಯೆ ಏನು..? ನೋವು ಏನು? ಎಂದೂ ಕೇಳದ ಸಿಎಂ ಡಿಸಿಎಂ. ಅನುದಾನದ ವಿಚಾರವಾಗಿ ಚರ್ಚಿಸಲು ತಯಾರಾಗಿದ್ದ ಶಾಸಕರಿಗೆ ನಿರಾಸೆ ತೋರಿಸಿದ್ದಾರೆ. ಅನುದಾನ ಕೇಳಲು ಎದ್ದು ನಿಂತ ಶಾಸರನ್ನೂ ಸಿಎಂ ಸಿದ್ದರಾಮಯ್ಯ ಗಪ್‌ಚುಪ್ ಮಾಡಿದ್ದಾರೆ. ಸಿಎಂ, ಡಿಸಿಎಂ ಸುದೀರ್ಘ ಭಾಷಣ ಮಾಡಿ ಶಾಸಕಾಂಗ ಸಭೆ ಅಂತ್ಯವಾಗಿದೆ.

ಶಾಸಕಾಂಗ ಪಕ್ಷದ ಸಭೆಯಲ್ಲಿ ಬಿಜೆಪಿ ಹಾಗೂ ಅನುದಾನ ವಿಚಾರ ಪ್ರಸ್ತಾಪಿಸಿದ ಸಿಎಂ ಸಿದ್ದರಾಮಯ್ಯ, ಅಧಿವೇಶನದಲ್ಲಿ ಬಿಜೆಪಿ ಅವರಿಗೆ ಯಾವುದೇ ಇಶ್ಯು ಇಲ್ಲ. ವಕ್ಫ್ ಹಾಗೂ ಪಂಚಮಸಾಲಿ ಮೀಸಲಾತಿ ಬಿಟ್ಟರೆ ಬೇರೇನೂ ವಿಚಾರ ಅವರಿಗೆ ಇರಲಿಲ್ಲ. ವಕ್ಫ್ ವಿಚಾರದಲ್ಲಿ ಸಚಿವ ಜಮೀರ್ ಅಹಮದ್ ಒಳ್ಳೆಯ  ಉತ್ತರ ಕೊಟ್ಟಿದ್ದಾರೆ. ದುಡ್ಡಿಲ್ಲ ದುಡ್ಡಿಲ್ಲ ಅಂತ ಹೇಳಬೇಡಿ, ನಮ್ಮ ಬಳಿ ದುಡ್ಡು ಇದೆ. ಬಿಜೆಪಿಯವರು ಸುಮ್ಮನೆ ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ದುಡ್ಡು ಇಲ್ಲದೇ ಇದ್ದಿದ್ದರೆ ರೋಣದಲ್ಲಿ 200 ಕೋಟಿ ರೂ. ಕೆಲಸ ಮಾಡೋಕೆ ಆಗ್ತಿತ್ತಾ..? ಸಚಿವ ಪರಮೇಶ್ವರ್ ಅವರ ಕ್ಷೇತ್ರದಲ್ಲಿ ಕೆಲಸ ಮಾಡೋಕೆ ಆಗ್ತಿತ್ತಾ? ಬಿಜೆಪಿಯವರು ಅನುದಾನ ಇಲ್ಲ ಎಂದು ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡ್ತಿದ್ದಾರೆ ಎಂದು ಶಾಸಕರಿಗೆ ಹೇಳಿದರು.

ಇದರ ನಡುವೆ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಏರು ಧ್ವನಿಯಲ್ಲಿ ಅನುದಾನ ಕೇಳಿದರೆ, ಸಿಎಂ ಸಿದ್ದರಾಮಯ್ಯ ಅವರ ಏ ನಾರಾಯಣಸ್ವಾಮಿ ಆಮೇಲೆ ಮಾತಾಡ್ತೀನಿ‌ ಎಂದು ಬೇಡಿಕೆ ತಳ್ಳಿ ಹಾಕಿದರು. ಇದರ ಬೆನ್ನಲ್ಲಿಯೇ ಶಾಸಕ ವಿಜಯಾನಂದ ಕಾಶಪ್ಪನವರ್ ಕೂಡ ಅನುದಾನಕ್ಕೆ ಬೇಡಿಕೆ ಇಟ್ಟರು. ಆಗ ಕಾಶಪ್ಪನವರ್ ನೀನಾ... ನಾಮ ಹಾಕಿಕೊಂಡೇ ಬಂದಿಲ್ಲವಲ್ಲ ಎಂದು ಮಾತು ಮರೆಸಿದರು. ಪರವಾಗಿಲ್ಲ ಸಿಎಂ ನಾಮ ಹಾಕಿಕೊಂಡು ಬಂದಿಲ್ಲ ಎಂದು ಹೇಳುವ ಮೂಲಕ ನಮಗ ನಾಮ ಹಾಕಿದರು ಎಂದು ಕೆಲವು ಶಾಸಕರು ನಗು ನಗುತ್ತಲೇ ತಿರುಗೇಟು ನೀಡಿದರು.

ಇದನ್ನೂ ಓದಿ: ಸರ್ಕಾರಿ ಖಜಾನೆಯಲ್ಲಿ ಕಾಸಿಲ್ವಾ?; ತಾನೇ ಘೋಷಿಸಿದ ಅನುದಾನದಲ್ಲಿ ಭಾರೀ ಬಾಕಿ ಉಳಿಸಿಕೊಂಡ ಸರ್ಕಾರ!

ಕಳೆದ ಬಾರಿ ಘೋಷಣೆ ಮಾಡಿದ್ದ 25 ಕೋಟಿ ರೂ. ಅನುದಾನ ಬಂದಿಲ್ಲ ಎಂದು ಕೆಲ ಶಾಸಕರಿಂದ ಪ್ರಶ್ನೆ ಬಂದಿತು. ಕೆಲವರಿಗೆ ಬಂದಿದೆ, ಕೆಲವರಿಗೆ ಬಂದಿಲ್ಲ ಸರಿ ಹೋಗುತ್ತದೆ ಎಂದು ಸಿಎಂ ಸಮಜಾಯಿಷಿ ನೀಡಿದರು. ಎಲ್ಲಾ ಶಾಸಕರಿಗೆ ತಲಾ 10 ಕೋಟಿ ರೂ.ನಂತೆ ಸುಮಾರು 2000 ಕೋಟಿ ಅನುದಾನ ನೀಡುತ್ತೇವೆ. ಮನೆ ಕಟ್ಟೋದಕ್ಕೆ ಸರ್ಕಾರ ಕೊಡ್ತಿರುವ ಅನುದಾನ ಕಡಿಮೆ ಇದೆ. ಈ ಅನುದಾನ ಹೆಚ್ಚಿಸಿ ಎಂದು ಮನವಿ ಮಾಡಿದ ಕುಣಿಗಲ್ ಶಾಸಕ ಡಾ. ರಂಗನಾಥ್. ಸಮಾಜ ಕಲ್ಯಾಣ ಇಲಾಕೆಯಲ್ಲಿ 30 ಸಾವಿರ ಕೋಟಿ ರೂ. ಇದೆ ಎಂದ ಸಚಿವ ಮಹದೇವಪ್ಪ. ಎಲ್ಲಿದೆ ಸ್ವಿಸ್ ಬ್ಯಾಂಕ್ ನಲ್ಲಿರಬೇಕು ಎಂದು ಕಿಚಾಯಿಸಿದ ಮತ್ತೊಬ್ಬ ಸಚಿವರು. ಒಟ್ಟಿನಲ್ಲಿ ಅನುದಾನ ವಿಚಾರದ ಬಗ್ಗೆ ಸರ್ಕಾರವನ್ನ ಪ್ರಶ್ನಿಸಲು ತಯಾರಾಗಿದ್ದ ಶಾಸಕರಿಗೆ ಸಿಎಲ್‌ಪಿ ಸಭೆ ಭಾರೀ ನಿರಾಸೆ ಮಾಡಿದೆ.