ಬಿಜೆಪಿಗೆ ಮತ್ತೆ ಸೆಡ್ಡು ಹೊಡೆದ ಅರುಣ್ ಪುತ್ತಿಲ, ಕರಾವಳಿಯಲ್ಲಿ ತಣ್ಣಗಾಗದ ಬಂಡಾಯದ ಬೆಂಕಿ!
ದೆಹಲಿಯಲ್ಲಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕವೂ ಹಿಂದೂ ಮುಖಂಡ ಅರುಣ್ ಪುತ್ತಿಲ ಅವರ ಬಂಡಾಯ ತಣಿಯದಿಲ್ಲ. ಕರಾವಳಿಯಲ್ಲಿ ಬಂಡಾಯದ ಬೆಂಕಿ ಮುಂದುವರಿದಿದೆ.
ಪುತ್ತೂರು (ಜು.11): ದೆಹಲಿಯಲ್ಲಿ ಬಿ.ಎಲ್.ಸಂತೋಷ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕವೂ ಹಿಂದೂ ಮುಖಂಡ ಅರುಣ್ ಪುತ್ತಿಲ ಅವರ ಬಂಡಾಯ ತಣಿಯದಿಲ್ಲ. ಅವರು ಕಟ್ಟಿದ ಪುತ್ತಿಲ ಪರಿವಾರ ಸಂಘಟನೆ ಪುತ್ತೂರಿನ ಗ್ರಾ.ಪಂ ಉಪಚುನಾವಣೆ ಅಖಾಡಕ್ಕೆ ಧುಮುಕಿದೆ. ಪುತ್ತಿಲ ಪರಿವಾರದ ಬೆಂಬಲಿತ ಅಭ್ಯರ್ಥಿಗಳು ಗ್ರಾ.ಪಂ ಚುನಾವಣೆ ಸ್ಪರ್ಧೆಗೆ ಇಳಿದಿದ್ದಾರೆ. ನಿಡ್ಪಳ್ಳಿ ಗ್ರಾ.ಪಂ ಪುತ್ತಿಲ ಪರಿವಾರದ ಅಭ್ಯರ್ಥಿಯಾಗಿ ಜಗನ್ನಾಥ್ ರೈ ಹಾಗೂ ಆರ್ಯಾಪು ಗ್ರಾ.ಪಂ ಉಪಚುನಾವಣೆಗೆ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ನಾಮಿನೇಶನ್ ಸಲ್ಲಿಸಿದ್ದು, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಸೆಡ್ಡು ಹೊಡೆದು ಪುತ್ತಿಲ ಪರಿವಾರ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಈ ಮೂಲಕ ಪುತ್ತೂರಿನ ಹಳ್ಳಿ ಹಳ್ಳಿಗೂ ಪುತ್ತಿಲ ತನ್ನ ಸಾಮ್ರಾಜ್ಯ ವಿಸ್ತರಿಸುತ್ತಿರೋ ಸೂಚನೆ ಸಿಕ್ಕಿದೆ. ದ.ಕ ಲೋಕಸಭಾ ಸ್ಥಾನದ ಆಕಾಂಕ್ಷಿಯೂ ಆಗಿರೋ ಅರುಣ್ ಪುತ್ತಿಲ. ರಾಜ್ಯ ಬಿಜೆಪಿಯಲ್ಲಿ ಬಹುದೊಡ್ಡ ಸ್ಥಾನಮಾನದ ನಿರೀಕ್ಷೆಯಲ್ಲಿದ್ದಾರೆ. ಇದೀಗ ಬಂಡಾಯ ಶಮನದ ಯತ್ನದ ಮಧ್ಯೆಯೇ ಮತ್ತೆ ಪುತ್ತಿಲ ಬಂಡಾಯ ಕಾಣುತ್ತಿದೆ.