
ಈ ಬಾರಿಯ ಗಣರಾಜ್ಯೋತ್ಸವದ ವಿಶೇಷತೆಯೇನು ಗೊತ್ತಾ?
ದೆಹಲಿಯಲ್ಲಿ 76ನೇ ಗಣರಾಜ್ಯೋತ್ಸವದ ಆಚರಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಜನವರಿ 26, 2025 ರಂದು ಕರ್ತವ್ಯಪಥದಲ್ಲಿ ನಡೆಯಲಿರುವ ಪಥಸಂಚಲನಕ್ಕಾಗಿ ಸಶಸ್ತ್ರ ಪಡೆಗಳು, ಪೊಲೀಸ್ ದಳಗಳು, ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ ಸೇರಿದಂತೆ ವಿವಿಧ ತಂಡಗಳು ತೀವ್ರ ತಾಲೀಮು ನಡೆಸುತ್ತಿವೆ.ಈ ವರ್ಷದ ಗಣರಾಜ್ಯೋತ್ಸವದ ಥೀಮ್ 'ಸುವರ್ಣ ಭಾರತ: ಪರಂಪರೆ ಮತ್ತು ಪ್ರಗತಿ' ಆಗಿದ್ದು, ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಅಭಿವೃದ್ಧಿಯ ಪ್ರಯಾಣವನ್ನು ಪ್ರತಿಬಿಂಬಿಸುತ್ತದೆ. ಪಥಸಂಚಲನದಲ್ಲಿ ಆಂಧ್ರಪ್ರದೇಶ, ಬಿಹಾರ, ಚಂಡೀಗಢ, ಗೋವಾ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ ಮತ್ತು ಮಧ್ಯಪ್ರದೇಶ ಸೇರಿದಂತೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರಗಳು ಭಾಗವಹಿಸಲಿವೆ. ಹೆಚ್ಚುವರಿಯಾಗಿ, 11 ಕೇಂದ್ರ ಸರ್ಕಾರಿ ತುಕಡಿಗಳು ಈ ಭವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿವೆ.