Uttara Kannada: 350ಕ್ಕೂ ಹೆಚ್ಚು ಅಡಿಕೆ, ಬಾಳೆ ಗಿಡಗಳನ್ನು ಕಡಿದು ಹಾಕಿದ ಅರಣ್ಯ ಇಲಾಖೆ ಸಿಬ್ಬಂದಿ
ಉತ್ತರಕನ್ನಡ (Uttara Kannada) ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಟ್ಟಿಕೇರಿ ಪಂಚಾಯತ್ ವ್ಯಾಪ್ತಿಯ ಶವೆಗುಳಿ ಗ್ರಾಮದಲ್ಲಿ ರೈತರಿಗೆ ಸೇರಿದ ಸುಮಾರು 350ಕ್ಕೂ ಹೆಚ್ಚು ಅಡಿಕೆ ಮತ್ತು ಬಾಳೆ ಗಿಡಗಳನ್ನು ಕಡಿದು ಹಾಕಿ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ ನಡೆಸಿದ್ದಾರೆ.
ಉತ್ತರ ಕನ್ನಡ (ಜ. 31): ಅಂಕೋಲಾ (Ankola) ತಾಲ್ಲೂಕಿನ ಹಟ್ಟಿಕೇರಿ ಪಂಚಾಯತ್ ವ್ಯಾಪ್ತಿಯ ಶವೆಗುಳಿ ಗ್ರಾಮದಲ್ಲಿ ರೈತರಿಗೆ ಸೇರಿದ ಸುಮಾರು 350ಕ್ಕೂ ಹೆಚ್ಚು ಅಡಿಕೆ ಮತ್ತು ಬಾಳೆ ಗಿಡಗಳನ್ನು ಕಡಿದು ಹಾಕಿ ಅರಣ್ಯ ಇಲಾಖೆ ಸಿಬ್ಬಂದಿ ದೌರ್ಜನ್ಯ ನಡೆಸಿದ್ದಾರೆ. ಶವೆಗುಳಿಯ ಬೆಳ್ಳ ತಮ್ಮಣ್ಣ ಕುಣಬಿ ಮತ್ತು ಸಾತಾವುಳ್ಳು ಕುಣಬಿ ಅವರು ಬೆಳೆಸಿದ ಅಂದಾಜು 5ರಿಂದ 6 ವರ್ಷದ ಅಡಿಕೆ ಮರ ಮತ್ತು ಫಲ ಕೊಡುವಷ್ಟು ದೊಡ್ಡದಾಗಿರುವ ಬಾಳೆ ಗಿಡಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು 8 ಮಂದಿ ಕತ್ತಿ, ಕೊಡಲಿ ಹಿಡಿದುಕೊಂಡು ಬಂದು ಗಿಡಗಳನ್ನು ಕೊಚ್ಚಿ ಹಾಕಿ ಬಿಸಾಕಿದ್ದಾರೆ.
Karwar: ಸೀಬರ್ಡ್ ನೌಕಾನೆಲೆಗೆ ಭೂಮಿಕೊಟ್ಟ ಹಾಲಕ್ಕಿ ಒಕ್ಕಲಿಗರಿಗಿಲ್ಲ ಉದ್ಯೋಗ..!
ವಿಷಯ ತಿಳಿದ ಕೃಷಿಕರು ಸ್ಥಳಕ್ಕೆ ಓಡೋಡಿ ಬರುವುದರೊಳಗೆ ನೂರಾರು ಮರಗಳು ನೆಲಕ್ಕೊರಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಅಡಿಕೆ ಮರ ಹಾಗೂ ಬಾಳೆ ಗಿಡಗಳನ್ನು ಕಡಿಯುವುದನ್ನು ಮತ್ತೆ ಮುಂದುವರಿಸಿದಾಗ ಕೃಷಿಕರು ಕಡಿಯದಂತೆ ಗೋಗರೆದರೂ ಇಲಾಖೆಯ ಅಧಿಕಾರಿ, ಸಿಬ್ಬಂದಿ ಕೃಷಿಕರ ಮೆಲೆ ದಬ್ಬಾಳಿಕೆ ನಡೆಸಿದ್ದು, ಮುಂದೆ ಬಂದರೆ ಬೂಟು ಗಾಲಿನಿಂದ ಒದೆಯುವುದಾಗಿ ರೈತರನ್ನು ಬೆದರಿಸಿದ್ದಾರೆ.
ಅಧಿಕಾರಿಗಳು ಯಾವೊಂದು ನೋಟೀಸ್ ಕೂಡಾ ನೋಡದೆ ಏಕಾಏಕಿ ಮರ ಗಿಡಗಳನ್ನು ನೆಲಕ್ಕುರುಳಿಸಿದ್ದು, ರೈತರ ಹೊಟ್ಟೆಗೆ ಹೊಡೆದಂತಾಗಿದೆ. ಶವೆಗುಳಿ ಅಂಕೋಲಾ ತಾಲ್ಲೂಕು ಕೇಂದ್ರದಿಂದ ಸುಮಾರು 30 ರಿಂದ 40 ಕಿಲೋ ಮೀಟರ್ ದೂರದಲ್ಲಿ ದಟ್ಟಾರಣ್ಯ ಪ್ರದೇಶದಲ್ಲಿದೆ. ಹಟ್ಟಿಕೇರಿ ಪಂಚಾಯತ್ ವ್ಯಾಪ್ತಿಗೆ ಸೇರುವ ಈ ಗ್ರಾಮದ ನಿವಾಸಿಗಳು ಪಂಚಾಯತ್ ಕಚೇರಿಗೆ ಬರಬೇಕೆಂದರೆ ಸುಮಾರು 10 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ, ಕಲ್ಲು, ಮುಳ್ಳಿನ ಹಾದಿಯಲ್ಲಿ ನಡೆದುಕೊಂಡು ಬರಬೇಕು. ಮೂಲಭೂತ ಸೌಕರ್ಯಗಳೇ ಇಲ್ಲದ ಈ ಊರಿನಲ್ಲಿರುವ ನೂರರಷ್ಟು ಕುಟುಂಬಗಳು 35-40 ವರ್ಷಗಳಿಂದ ಅತಿಕ್ರಮಣವಾಗಿ ನೆಲೆಸಿರುವಂತವರೇ.
ಎಲ್ಲಾ ಜನರು ಹಿಂದಿನಿಂದಲೇ ಅರಣ್ಯ ಜಾಗದಲ್ಲೇ ಭತ್ತ ಹಾಗೂ ತೋಟಗಾರಿಕೆ ಕೃಷಿ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ಇದು ಅರಣ್ಯ ಜಾಗ ಎಂದು ಆಗಾಗ ರೈತರನ್ನು ಪೀಡಿಸುವ ಅರಣ್ಯಾಧಿಕಾರಿಗಳು, ಹಣಕ್ಕಾಗಿ ಅವರ ಮೇಲೆ ದೌರ್ಜನ್ಯ ನಡೆಸುತ್ತಾರೆ. ಈ ಹಿಂದೆಯೂ ಸ್ಥಳೀಯ ರೈತರೋರ್ವರ ಮೇಲೆ ದೌರ್ಜನ್ಯ ನಡೆಸಿರುವ ಅಧಿಕಾರಿಗಳು, ಬಳಿಕ ರೈತನಿಂದ ಹಣ ಪಡೆದುಕೊಂಡು ಸುಮ್ಮನಿದ್ದರು ಎಂದು ಆರೋಪಿಸಲಾಗಿದೆ. ಇದೀಗ ಮತ್ತೆ ಈ ಭಾಗದ ರೈತರ ಬೆಳೆಯನ್ನು ಹಾಳುಗೆಡವಿದ್ದಾರೆ. ರೈತರು ಸುಮಾರು 5-6 ವರ್ಷಗಳಿಂದ ಮಕ್ಕಳಂತೇ ಬೆಳೆಸಿದ್ದ ಅಡಿಕೆ ಮರಗಳ ಪೈಕಿ ಬಹುತೇಕ ಮರಗಳು ಮುಂದಿನ ವರ್ಷ ಫಲ ಕೊಡುವ ಹಂತಕ್ಕೆ ಬಂದಿದ್ದವು. ಈಗ ಅವುಗಳನ್ನು ಅವರ ಕಣ್ಣೇದುರೇ ಅಧಿಕಾರಿಗಳು ಕಡಿದು ಹಾಕಿದ್ದಾರೆ.