ಮೈಕ್ರೋ ಫೈನಾನ್ಸ್‌ ಕಿರುಕುಳ ತಾಳಲಾರದೇ ಗ್ರಾಮವನ್ನೇ ತೊರೆದ 100ಕ್ಕೂ ಹೆಚ್ಚು ಕುಟುಂಬಗಳು!

ಖಾಸಗಿ ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಚಾಮರಾಜನಗರ ಜಿಲ್ಲೆಯ ನೂರಾರು ಕುಟುಂಬಗಳು ತಮ್ಮ ಗ್ರಾಮಗಳನ್ನು ತೊರೆದಿವೆ. ಸಾಲದ ಹೊರೆ ತಾಳಲಾರದೆ ಕೆಲವರು ಮಕ್ಕಳ ವಿದ್ಯಾಭ್ಯಾಸವನ್ನೂ ಮೊಟಕುಗೊಳಿಸಿ ಊರು ಬಿಟ್ಟಿದ್ದಾರೆ. ಕಿಡ್ನಿ ಮಾರಿ ಸಾಲ ತೀರಿಸುವ ಆಲೋಚನೆ ಮಾಡುತ್ತಿರುವ ಬಾಲಕನೊಬ್ಬನ ಅಳಲು ಮೈಕ್ರೋಫೈನಾನ್ಸ್ ಕಿರುಕುಳದ ಭೀಕರತೆಯನ್ನು ಎತ್ತಿ ತೋರಿಸುತ್ತದೆ.

First Published Jan 10, 2025, 8:25 PM IST | Last Updated Jan 10, 2025, 8:25 PM IST

ಚಾಮರಾಜನಗರ (ಜ.10): ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ  ಖಾಸಗಿ  ಮೈಕ್ರೋ  ಫೈನಾನ್ಸ್ ಕಂಪನಿಗಳ ಹಾವಳಿ ಮೇರೆ ಮೀರಿದೆ. ಇವರ ಕಿರುಕುಳ ತಾಳಲಾರದೆ ಚಾಮರಾಜನಗರ ಜಿಲ್ಲೆಯ ಗ್ರಾಮಗಳಲ್ಲಿ ನೂರಾರು ಕುಟುಂಬಗಳು ತಮ್ಮ ಸ್ವಗ್ರಾಮವನ್ನೇ ತೊರೆದಿವೆ.

ಅದರಲ್ಲಿಯೂ ಒಬ್ಬ ಬಾಲಕ ನಮ್ಮಮ್ಮನನ್ನು ಚಾಪೆ ಹಾಸಿ ಕುಳಿತುಕೊಂಡು ನಿಂತಲ್ಲಿಯೇ ಸಾಲ ಕಟ್ಟು ಅಂತಾರೆ ಸಾರ್. ನಾನು ಅವರಿಗೆ ಮತ್ತು ಸರ್ಕಾರಕ್ಕೆ ಕೈ ಮುಗಿದು ಕೇಳ್ಕೊಳ್ತೀನಿ. ನನ್ನ ಒಂದು ಕಿಡ್ನಿ ಮಾರಾಟ ಮಾಡೋದಕ್ಕೆ ಪರ್ಮಿಷನ್ ಕೊಡ್ಲಿ, ನಾನೇ ನನ್ನ ಕಿಡ್ನಿ ಮಾರಿ  ಅಪ್ಪ ಅಮ್ಮನ ಸಾಲ ತೀರಿಸಿ ಹೆಂಗೋ ಬದುಕೊಂಡು ಹೋಗ್ತೀವಿ ಎಂದು ಅಳಲು ತೋಡಿಕೊಂಡಿದ್ದಾನೆ. ಹಾಗದರೆ, ಇವರ ಟಾರ್ಚರ್ ಯಾವ ರೀತಿ ಇದೆ ಅಂತ ನೀವೇ ಸುಲಭವಾಗಿ ಊಹಿಸಬಹುದು.

ಕೆಲವು ಮೈಕ್ರೋಫೈನಾನ್ಸ್ ಕಂಪನಿಗಳು ಬಡ ಜನರ ರಕ್ತ ಹೀರುತ್ತಿವೆ. ಯಾವುದೇ ಭದ್ರತೆ ಇಲ್ಲದೆ ಕೇವಲ ಒಂದು ಆಧಾರ್ ಕಾರ್ಡ್ ಜೆರಾಕ್ಸ್ ಪಡೆದು  ಸುಲಭವಾಗಿ ಸಾಲ ನೀಡುತ್ತಿವೆ. ಸುಲಭವಾಗಿ ಸಾಲ ಸಿಗುತ್ತೆ ಎಂಬ ಕಾರಣಕ್ಕೆ ಕೂಲಿ ಕಾರ್ಮಿಕರು, ಮಹಿಳೆಯರು ತಮ್ಮ  ಇವರ ಸಾಲದ ಜಾಲಕ್ಕೆ  ಬಿದ್ದು ದೈನಂದಿನ ವ್ಯವಹಾರಗಳಿಗೆ ಸಾಲ ಪಡೆಯುತ್ತಿದ್ದಾರೆ. ಬಡ್ಡಿಯೊಂದಿಗೆ  ವಾರದ ಕಂತು ತಿಂಗಳ ಕಂತು ಹೀಗೆ ಸಾಲ ತೀರಿಸುತ್ತಾರೆ.

ಆದರೆ,  ಸಾಲ ಮರುಪಾವತಿ ಮಾಡುವುದು ಒಂದು ದಿನ ತಡವಾದರೂ ಹೊತ್ತಲ್ಲದ ಹೊತ್ತಿನಲ್ಲಿ ಕಿರುಕುಳ ನೀಡುತ್ತಿದ್ದಾರೆ. ಬಡ್ಡಿಗೆ ಬಡ್ಡಿ ಸೇರಿಸಿ ಸಾಲ ಜಾಸ್ತಿಯಾಗಿ ಇವರ ಕಿರುಕುಳ ತಡೆಯಲಾರದೆ ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೂರಾರು ಕುಟುಂಬಗಳು ಗ್ರಾಮ ತೊರೆದಿವೆ. ಸಾಲ ತೀರಿಸಲಾಗದೆ ಮನೆಗೆ ಬೀಗ ಹಾಕಿ ಊರು ಖಾಲಿ ತಲೆಮರೆಸಿಕೊಂಡಿವೆ ಹಲವೆಡೆ ಮಕ್ಕಳನ್ನು ಶಾಲೆ ಬಿಡಿಸಿ ತಮ್ಮ ಜೊತೆ ಕರೆದೊಯ್ದಿವೆ ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕಾಗುತ್ತಿದೆ.