ಬಳ್ಳಾರಿಯಲ್ಲಿ ಎಳ್ಳಮವಾಸ್ಯೆ ದಿನದಂದು ಭಯಾನಕ ವಾಮಾಚಾರ; 4 ತಲೆಬುರುಡೆ, ಎಲುಬು ಇಟ್ಟು ಪೂಜೆ!
ಬಳ್ಳಾರಿಯ ಮಾರ್ಕಂಡೇಯ ಕಾಲೋನಿಯಲ್ಲಿ ಎಳ್ಳಮವಾಸ್ಯೆ ದಿನದಂದು ನಾಲ್ಕು ತಲೆಬುರುಡೆ ಮತ್ತು ಹಲವಾರು ಎಲುಬುಗಳನ್ನು ಬಳಸಿ ವಾಮಾಚಾರ ಮಾಡಲಾಗಿದೆ. ಇದರಿಂದಾಗಿ ಸ್ಥಳೀಯರು ಭಯಭೀತರಾಗಿದ್ದು, ಮನೆಗಳನ್ನು ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಪದೇ ಪದೇ ವಾಮಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಿಸಿ ಕ್ಯಾಮರ ಅಳವಡಿಸುವಂತೆ ಮತ್ತು ಪೊಲೀಸ್ ಗಸ್ತು ಹೆಚ್ಚಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಬಳ್ಳಾರಿ (ಡಿ.30): ಬಳ್ಳಾರಿ ನಗರದ ಜನತೆಯನ್ನೇ ಬೆಚ್ಚಿ ಬೀಳಿಸುವಂತಹ ಘಟನೆ ಎಳ್ಳಮವಾಸೆ ದಿನದಂದು ಮಾಡಲಾಗಿದೆ. ಬಳ್ಳಾರಿಯ ಜನರನ್ನು ಭಯ ಬೀಳುವ ರೀತಿಯಲ್ಲಿ ತುಂಬಿದ ಓಣಿಯಲ್ಲಿ ವಾಮಾಚಾರ ಮಾಡಲಾಗಿದೆ. ನಾಲ್ಕು ತಲೆಬುರುಡೆ, ಹತ್ತಾರು ಎಲುಬುಗಳನ್ನು ಮುಂದಿಟ್ಟು, ಕೂದಲು ಸುಟ್ಟು, ದೀಪ ಹಚ್ಚಿಟ್ಟು ಪೂಜೆ ಮಾಡಲಾಗಿದೆ. ಇದರಿಂದ ಮಾರ್ಕಂಡೇಯ ಕಾಲೋನಿ ಜನರು ಬೆಚ್ಚಿ ಬಿದ್ದಿದ್ದಾರೆ.
ಇಡೀ ವರ್ಷದಲ್ಲಿ ಅತ್ಯಂತ ಕೆಟ್ಟ ಅಮವಾಸ್ಯೆ ಎಂದು ಹೇಳಲಾಗುವ ಈ ಎಳ್ಳಮವಾಸ್ಯೆ ದಿನದಂದು ವಾಮಾಚಾರ ಮಾಡಿದ್ದು ಇಡೀ ಏರಿಯಾ ಜನರು ಭಯ ಬಿದ್ದು, ತಮ್ಮ ಮನೆಯನ್ನು ಒಂದಷ್ಟು ದಿನಗಳ ಕಾಲ ತೊರೆಯಲು ಮುಂದಾಗಿದ್ದಾರೆ. ವಾಮಾಚಾರ ಮಾಡಿದ ಸ್ಥಳದಲ್ಲಿ ವಾಟರ್ ಟ್ಯಾಂಕ್ ಇರೋ ಹಿನ್ನಲೆ ಯಾರು ನೀರು ತೆಗೆದುಕೊಂಡು ಹೋಗುತ್ತಿಲ್ಲ. ಪಕ್ಕದಲ್ಲಿಯೇ ಅಂಗನವಾಡಿ ಶಾಲೆಯೂ ಇದ್ದು, ಇಲ್ಲಿಗೆ ಮಕ್ಕಳನ್ನು ಕೂಡ ಕಳುಹಿಸುತ್ತಿಲ್ಲ.
ಈ ಏರಿಯಾದಲ್ಲಿ ಪದೇ ಪದೇ ಕೆಲವು ಕಿಡಿಗೇಡಿಗಳು ವಾಮಾಚಾರ ಮಾಡುತ್ತಿರುವ ಹಿನ್ನಲೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಇಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ. ಕೂಡಲೇ ಈ ಏರಿಯಾದಲ್ಲಿ ಸಿಸಿ ಕ್ಯಾಮರ ಅಳವಡಿಸಿ ಪೊಲೀಸ್ ಗಸ್ತು ಹೆಚ್ಚಿಸಬೇಕು. ಆಗ ವಾಮಾಚಾರ ಮಾಡುವುದು ತಪ್ಪಲಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಬ್ರೂಸ್ ಪೇಟೆ ಪೊಲೀಸರು ವಾಮಾಚಾರದ ವಸ್ತುಗಳನ್ನು ತೆರವುಗೊಳಿಸಿ ಹೋಗಿದ್ದಾರೆ.