Asianet Suvarna News Asianet Suvarna News

Corona Effect: ಮನೆ ಮಂದಿ ಕೂಡಿ ದುಡಿದ್ರೂ ಬಾಗಲಕೋಟೆ ನೇಕಾರರಿಗೆ ಸಿಗುತ್ತಿಲ್ಲ ಕೂಲಿ

*  ಕೈಮಗ್ಗ ನೇಕಾರರ ಮೇಲೆ ಕೊರೋನಾ ಎಫೆಕ್ಟ್
*  ಮಹಾರಾಷ್ಟ್ರಕ್ಕೆ ನೇಕಾರರ ಉತ್ಪನ್ನಗಳ ರಫ್ತು ಬಂದ್
*  ನೇಕಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸರ್ಕಾರಕ್ಕೆ ಮನವಿ 
 

ಬಾಗಲಕೋಟೆ(ನ.26):  ಅವರೆಲ್ಲಾ ಬಡನೇಕಾರರು, ಮನೆಮಂದಿಯೆಲ್ಲಾ ಸೇರಿ ದುಡಿದ್ರೂ ಸೂಕ್ತ ಸಂಬಳ ಸಿಗೋದಿಲ್ಲ, ಇವುಗಳ ಮಧ್ಯೆಯೇ ಕಳೆದ ಎರಡು ವರ್ಷಗಳಿಂದ ಕೊರೋನಾ ತಂದಿಟ್ಟ ಸಂಕಷ್ಟ ಅಷ್ಟಿಷ್ಟಲ್ಲ. ಇವುಗಳ ಮಧ್ಯೆ ಮಹಾರಾಷ್ಟ್ರಕ್ಕೆ ರಫ್ತಾಗುತ್ತಿದ್ದ ಸೀರೆ, ರೇಷ್ಮೇ ಪೇಟ ಸ್ಥಗಿತವಾಗಿದ್ದು ಇದ್ರಿಂದ ಕೈಮಗ್ಗ ನೇಕಾರರ ಕುಟುಂಬಗಳು ಅತಂತ್ರವಾಗಿವೆ. 

ಹೌದು, ರಾಜ್ಯದಲ್ಲಿ ಅತಿಹೆಚ್ಚು ನೇಕಾರರು ಇರುವ ಜಿಲ್ಲೆಗಳಲ್ಲೊಂದಾಗಿರೋ ಬಾಗಲಕೋಟೆ ಜಿಲ್ಲೆಯ ಕಮತಗಿ, ಇಲಕಲ್, ಗುಳೇದಗುಡ್ಡ, ಕೆರೂರ ಸೇರಿದಂತೆ ವಿವಿಧ ಪಟ್ಟಣಗಳಲ್ಲಿ ಸಾವಿರಾರು ನೇಕಾರರ ಕುಟುಂಬಗಳಿವೆ. ಮನೆಮಂದಿಯೆಲ್ಲಾ ಸೇರಿ ಕೈಮಗ್ಗ ಸೀರೆ ನೇಯ್ಗೆಯಲ್ಲಿ ಈ ಕುಟುಂಬಗಳು ನಿತ್ಯ ಭಾಗಿಯಾಗ್ತಾರೆ. ಆದ್ರೆ ಇವರು ನೇಯ್ದ ಸೀರೆಗಳು, ರೇಷ್ಮೇ ಪೇಟಗಳು ಜಿಲ್ಲೆಯಿಂದ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರಕ್ಕೆ ರವಾನೆಯಾಗುತ್ತಿದ್ದವು. ರಪ್ತು ಸರಿಯಾಗಿದ್ದಾಗ ಕೂಲಿ ಕಡಿಮೆಯಾದ್ರೂ ಸಹ ಕೊಂಚ ನೆಮ್ಮದಿಯಿಂದ ಇದ್ದ ಕುಟುಂಬಗಳು ಇತ್ತೀಚಿನ ಎರಡು ವರ್ಷಗಳಲ್ಲಿನ ಕೊರೋನಾ ಎಫೆಕ್ಟ್‌ನಿಂದಾಗಿ ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ACB Raids: ಮಗನಿಂದ ಬಯಲಾಯ್ತು ಪೈಪ್ ಒಳಗಿನ ಅಕ್ರಮ ಸಂಪತ್ತು!

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಕೊರೋನಾ ಇದ್ದರಿಂದ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಿಂದ ಹೋಗುತ್ತಿದ್ದ ನೇಕಾರರ ಉತ್ಪನ್ನಗಳನ್ನು ಕಳುಹಿಸಲು ಆಗಿಲ್ಲ. ಇದರಿಂದ ನೇಕಾರ ಕುಟುಂಬಗಳು ಮತ್ತಷ್ಟು ಅತಂತ್ರ ಪರಿಸ್ಥಿತಿ ಎದುರಿಸುವಂತಾಯಿತು. ಹೀಗಾಗಿ ಕೆಲವೊಂದಿಷ್ಟು ಜನ್ರು ಈಗ ನೇಕಾರಿಕೆಯನ್ನ ಬಿಟ್ಟು ಬೇರೆ ಬೇರೆ ಉದ್ಯೋಗ ಅರಸಿ ಬೇರೆ ಬೇರೆ ಊರುಗಳಿಗೂ ತೆರಳುತ್ತಿದ್ದಾರೆ. ಇತ್ತ ಸರ್ಕಾರವೂ ಸಹ ನೇಕಾರರಿಗೆ ಸಬ್ಸಿಡಿಯಂತ ಯೋಜನೆಗಳನ್ನ ರೂಪಿಸುವ ಮೂಲಕ ನೆರವಿಗೆ ಬರಬೇಕಾಗಿದೆ. ಮೊದಲೇ ನೇಕಾರರು ಕಡಿಮೆ ಕೂಲಿಯಿಂದ ಕನಿಷ್ಟ ಜೀವನ ನಡೆಸುವಂತಾಗಿದ್ದು, ಇತ್ತ ಕೈಮಗ್ಗಗಳಿರೋ ಮನೆಗಳಿಗೆ ಹೆಣ್ಣು ಸಹ ಕೊಡದೇ ಇರುವಂತಹ ಪರಿಸ್ಥಿತಿ ಬಂದೊದಗಿದೆ. ಹೀಗಾಗಿ ಸರ್ಕಾರ ನೇಕಾರರ ಕುಟುಂಬಗಳ ನೆರವಿಗೆ ಬರಲಿ ಅಂತಿದ್ದಾರೆ ನೊಂದ ನೇಕಾರರು.

ಒಟ್ಟಿನಲ್ಲಿ ಕೊರೋನಾದಿಂದ ಸಾಕಷ್ಟು ಉದ್ಯಮಗಳು ನೆಲಕಚ್ಚಿರುವ ಬೆನ್ನಲ್ಲೇ ಇತ್ತ ಕೈಮಗ್ಗದ ಉತ್ಪಾದನೆಯ ಮೇಲೂ ಕರಿನೆರಳು ಬೀರಿದ್ದು, ಆದಷ್ಟು ಬೇಗ ಉದ್ಯಮ ಚೇತರಿಕೆಯಾಗಲಿ ಇದರೊಟ್ಟಿಗೆ ಸರ್ಕಾರವೂ ಸಹ ನೇಕಾರರ ಬೆನ್ನಿಗೆ ನಿಲ್ಲುವಂತಾಗಲಿ ಅನ್ನೋದೆ ಎಲ್ಲರ ಆಶಯ. 
 

Video Top Stories