EXCLUSIVE! ಏಕರೂಪ ನಾಗರೀಕ ಸಂಹಿತೆ ಈ ಸಮಯದ ಅಗತ್ಯ: ಉತ್ತರಾಖಂಡ ಸ್ಪೀಕರ್‌ ರಿತು ಖಂಡೂರಿ ಭೂಷಣ್‌!

ಏಕರೂಪ ನಾಗರೀಕ ಸಂಹಿತೆ ಪರವಾಗಿ ಮಾತನಾಡಿರುವ ಉತ್ತರಾಖಂಡದ ಸ್ಪೀಕರ್‌ ರಿತು ಖಂಡೂರಿ ಭೂಷಣ್‌, ಕಾಯ್ದೆ ಈ ಸಮಯದ ಅಗತ್ಯ ಎಂದು ಹೇಳಿದ್ದಾರೆ.

First Published Apr 6, 2024, 7:39 PM IST | Last Updated Apr 6, 2024, 7:39 PM IST

ನವದೆಹಲಿ (ಏ.6): ಉತ್ತರಾಖಂಡ ಸ್ಪೀಕರ್ ರಿತು ಖಂಡೂರಿ ಭೂಷಣ್ ಅವರು ಏಷ್ಯಾನೆಟ್ ನ್ಯೂಸ್‌ಬಲ್‌ನ ಅನೀಶ್ ಕುಮಾರ್ ಜೊತೆಗಿನ ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಮಾತನಾಡಿದ್ದು, ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅನುಷ್ಠಾನವು ಇಂದಿನ ಅಗತ್ಯವಾಗಿದೆ ಮತ್ತು ಮಹಿಳೆಯರು ಮತ್ತು ಸಮಾಜವನ್ನು ಇದು  ಸಶಕ್ತಗೊಳಿಸುತ್ತದೆ ಎಂದಿದ್ದಾರೆ.

ಉತ್ತರಾಖಂಡ ಇತ್ತೀಚೆಗೆ ಸ್ವಾತಂತ್ರ್ಯದ ನಂತರ ಏಕರೂಪ ನಾಗರಿಕ ಸಂಹಿತೆ ಕಾನೂನನ್ನು ಜಾರಿಗೊಳಿಸಿದ ಭಾರತದ ಮೊದಲ ರಾಜ್ಯ ಎನಿಸಿಕೊಂಡಿದೆ. ಏಕರೂಪ ನಾಗರಿಕ ಸಂಹಿತೆ ಮಸೂದೆ 2024 ರ ಅಂಗೀಕಾರ -- ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಉತ್ತರಾಖಂಡದ ಅದರ ಸರ್ಕಾರದ ದೀರ್ಘಕಾಲದ ಬದ್ಧತೆಯನ್ನು ಪೂರೈಸುವುದಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಯೂ ಇದಕ್ಕೆ ಸಿಕ್ಕಿದೆ.

ಲೋಕಸಭೆ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ಏಕರೂಪ ನಾಗರಿಕ ಸಂಹಿತೆ ಇಂದು ದೇಶದ ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ. ಯುಸಿಸಿ ಹಿಂದೂ ಕೇಂದ್ರಿತ ಹೇರಿಕೆ ಎಂಬ ಟೀಕೆಗಳನ್ನು ತಳ್ಳಿಹಾಕಿದ ಉತ್ತರಾಖಂಡ ವಿಧಾನಸಭೆ ಸ್ಪೀಕರ್ ರಿತು ಖಂಡೂರಿ ಭೂಷಣ್, ಈ ಕಾಯ್ದೆ ಇಂದಿನ ಅಗತ್ಯ ಎಂದು ಹೇಳಿದ್ದಾರೆ.