
ಮೋದಿ ಮಾಸ್ಟರ್ ಸ್ಟ್ರೋಕ್‌ಗೆ ವಿಪಕ್ಷ ಕಂಗಾಲು, ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮುಗೆ ಹೆಚ್ಚುವರಿ ಮತ!
ದ್ರೌಪದಿ ಮುರ್ಮುಗೆ ಹಲವು ವಿಪಕ್ಷಗಳ ನಾಯಕರು ಅಡ್ಡ ಮತದಾನ ಮಾಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದರೆ, ಇತ್ತ ಎನ್‌ಡಿಎ ಅಭ್ಯರ್ಥಿಗೆ ನೆರವಾಗಿದ್ದಾರೆ. ವಿಪಕ್ಷಗಳ ರಾಜಕೀಯ ಲೆಕ್ಕಾಚಾರವನ್ನೇ ಉಲ್ಟಾ ಮಾಡಲು ಕಾರಣವಾಗಿದ್ದು ಪ್ರಧಾನಿ ನರೇಂದ್ರ ಮೋದಿ.
ರಾಷ್ಟ್ರಪತಿ ಚುನಾವಣಾ ಮತದಾನ ಸಂಜೆ 5 ಗಂಟೆಗೆ ಅಂತ್ಯಗೊಂಡಿದೆ. ವಿಪಕ್ಷಗಳ ಒಕ್ಕೂಟದಲ್ಲಿನ ಹಲವು ನಾಯಕರು ಅಡ್ಡ ಮತದಾನದ ಮೂಲಕ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ಮತ ನೀಡಿದ್ದಾರೆ. ಈಗಾಗಲೇ ಮುರ್ಮುಗೆ ಭಾರಿ ಬೆಂಬಲ ವ್ಯಕ್ತವಾಗಿದ್ದ ಕಾರಣ ಗೆಲುವು ಬಹುತೇಕ ಖಚಿತವಾಗಿತ್ತು. ಇದೀಗ ಅಂತರವೂ ಹೆಚ್ಚಾಗಲಿದೆ. ವಿಪಕ್ಷಗಳನ್ನೇ ಇಕ್ಕಟ್ಟಿನಲ್ಲಿ ಸಿಲುಕಿಸಿದ ಪ್ರಧಾನಿ ನರೇಂದ್ರ ಮೋದಿ, ಆದಿವಾಸಿ ಸಮುದಾಯದ ನಾಯಕಿ ದ್ರೌಪದಿ ಮುರ್ಮು ಕಣಕ್ಕಿಳಿಸಿ ರಾಷ್ಟ್ರಪತಿ ಚದುರಂಗದಾಟದಲ್ಲಿ ಮೇಲುಗೈ ಸಾಧಿಸಿದ್ದಾರೆ.