Kashi Vishwanath Corridor: ಮರುಕಳಿಸಲಿದೆ 'ಕಾಶಿ ವಿಶ್ವನಾಥ'ನ ಗತವೈಭವ: ವಾರಣಾಸಿಯಲ್ಲಿ ಹಬ್ಬದ ವಾತಾವರಣ!
*ಪ್ರಧಾನಿ ಮೋದಿ ಕನಸಿನ ಕಾಶಿ ಕಾರಿಡಾರ್
*ಎರಡೂವರೆ ವರ್ಷಗಳಲ್ಲಿ ಕಾಮಗಾರಿ ಪೂರ್ಣ
*339 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ
ವಾರಣಾಸಿ(ಡಿ. 13): ಪ್ರಧಾನಿ ನರೇಂದ್ರ ಮೋದಿ(PM Narendra Modi) ಸ್ವಕ್ಷೇತ್ರ ವಾರಣಾಸಿಯಲ್ಲಿ ಹಬ್ಬದ ವಾತಾವರಣ ಕಳೆಗಟ್ಟಿದೆ. ಐತಿಹಾಸಿಕ, ಅತ್ಯಂತ ಪುರಾತನ ಪವಿತ್ರ ಶಿವನ ದೇಗುಲ ಕಾಶಿ ವಿಶ್ವನಾಥ ಮಂದಿರದ(Kashi Vishwanath Temple) ಸಂಕೀರ್ಣದಲ್ಲಿ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿದೆ. ಇಂದು(ಡಿ.13) ಪ್ರಧಾನಿ ನರೇಂದ್ರ ಮೋದಿ ಕಾಶಿ ವಿಶ್ವನಾಥ ಧಾಮ ಕಾರಿಡಾರ್(Vishwanath Dham project) ಯೋಜನೆಯನ್ನು ಮಧ್ಯಾಹ್ನ 2 ಗಂಟೆಗೆ ಉದ್ಘಾಟಿಸಲಿದ್ದಾರೆ.
339 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ಪೂರ್ಣಗೊಳಿಸಲಾಗಿದೆ. ಐತಿಹಾಸಿಕ ದೇಗುಲ ಹಾಗೂ ಅದರ ಸುತ್ತಲಿನ ಸಂಕೀರ್ಣದಲ್ಲಿ ಈ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ವಿಶೇಷ ಅಂದರೆ ದೇವಾಲಯದ ಪರಂಪರೆ ಹಾಗೂ ಸಂಸ್ಕೃತಿಗೆ (Art and Culture) ಯಾವುದೇ ಧಕ್ಕೆ ಬರದ ರೀತಿಯಲ್ಲಿ ಕಾಶಿ ವಿಶ್ವನಾಥ ದೇಗುಲದ ಗತವೈಭವವನ್ನು ಪುನರ್ ನಿರ್ಮಿಸಲಾಗಿದೆ. 5,000 ಹೆಕ್ಟೇರ್ ಪ್ರದೇಶದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆ ತಲೆ ಎತ್ತಿದೆ. ಭೂಸ್ವಾದೀನ ಪಡಿಸಿದ ಬಳಿಕ 300ಕ್ಕೂ ಹೆಚ್ಚು ಕಟ್ಟಡಗಳನ್ನು ಕೆಡವಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗಿದೆ.