ನಮ್ಮದೇ ಸರ್ಕಾರ, ನಾನೇ 5 ವರ್ಷ ಸಿಎಂ: ಶಿವಸೇನೆ ಕನಸಿಗೆ ಫಡ್ನವೀಸ್ ಕೊಳ್ಳಿ
ಕಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಬಹುಮತ ಪಡೆದಿದ್ದರೂ, ಸರ್ಕಾರ ರಚನೆ ಕಗ್ಗಾಂಟಾಗಿಯೇ ಉಳಿದಿದೆ. 50:50 ಅಧಿಕಾರ ಹಂಚಿಕೆ ಸೂತ್ರ ಪಾಲಿಸಬೇಕೆಂದು ಶಿವಸೇನೆ ಪಟ್ಟುಹಿಡಿದ್ದಿದ್ದರೆ, ಬಿಜೆಪಿಯು ಅದು ಸಾಧ್ಯವಿಲ್ಲವೆಂದು ಖಂಡತುಂಡವಾಗಿ ಹೇಳಿದೆ.
ಮುಂಬೈ (ಅ.30): ಕಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಬಹುಮತ ಪಡೆದಿದ್ದರೂ, ವಾರವಾಗುತ್ತಾ ಬಂದರೂ ಸರ್ಕಾರ ರಚನೆ ಕಗ್ಗಾಂಟಾಗಿಯೇ ಉಳಿದಿದೆ.
ಫಲಿತಾಂಶ ಹೊರಬಿದ್ದ ಬಳಿಕ, 50:50 ಅಧಿಕಾರ ಹಂಚಿಕೆ ಸೂತ್ರ ಪಾಲಿಸಬೇಕೆಂದು ಶಿವಸೇನೆ ಪಟ್ಟುಹಿಡಿದ್ದಿದ್ದರೆ, ಬಿಜೆಪಿಯು ಅದು ಸಾಧ್ಯವಿಲ್ಲವೆಂದು ಖಂಡತುಂಡವಾಗಿ ಹೇಳುತ್ತಿದೆ. ನಾನೇ 5 ವರ್ಷದ ಅವಧಿಗೆ ಸಿಎಂ ಆಗಿರುವೆ ಎಂದು ದೇವೇಂದ್ರ ಫಡ್ನವೀಸ್ ಮಂಗಳವಾರ ಹೇಳಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ.
ಕಳೆದ ಅ.21ಕ್ಕೆ ವಿಧಾನಸಭೆ ಚುನಾವಣೆಗೆ ಮತದಾನ ನಡೆದಿತ್ತು, ಅ.24ಕ್ಕೆ ಫಲಿತಾಂಶ ಪ್ರಕಟವಾಗಿತ್ತು. 288 ಸದಸ್ಯಬಲದ ವಿಧಾನಸಭೆಯಲ್ಲಿ, ಬಿಜೆಪಿ105 ಸ್ಥಾನ ಗಳಿಸಿದರೆ, ಮಿತ್ರಪಕ್ಷ ಶಿವಸೇನೆ 56 ಸ್ಥಾನಗಳನ್ನು ಬಾಚಿಕೊಂಡಿದೆ.