ಜೈಲಲ್ಲಿರುವ ಉಗ್ರ ನಾಸೀರ್ ಎಸ್ಕೇಪ್ ಪ್ಲಾನ್: NIA ಬೆಚ್ಚಿಬೀಳಿಸುವ ಸತ್ಯ ಬಯಲು

ಲಷ್ಕರ್ ಉಗ್ರ ಟಿ.ನಾಸೀರ್ ಜೈಲಿನಿಂದ ಪರಾರಿಯಾಗಲು ರೂಪಿಸಿದ್ದ ಯೋಜನೆ ಬಯಲಾಗಿದೆ. ಐಎಎಸ್ ಅಧಿಕಾರಿ ಸೇರಿ ಮೂವರ ಬಂಧನವಾಗಿದ್ದು, ಜೈಲಿನೊಳಗೆ ಅಕ್ರಮ ಮೊಬೈಲ್ ಸರಬರಾಜು ಮಾಡುತ್ತಿದ್ದ ಮನೋವೈದ್ಯನ ಪಾತ್ರ ಬೆಳಕಿಗೆ ಬಂದಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಜು.10): ಭಯೋತ್ಪಾದಕ ಟಿ.ನಾಸೀರ್ ಜೈಲಿನಿಂದ ಎಸ್ಕೇಪ್ ಆಗುವ ಯೋಜನೆಯು ಎನ್‌ಐಎ ಅಧಿಕಾರಿಗಳನ್ನೇ ಬೆಚ್ಚಿ ಬೀಳಿಸುವಂತಾಗಿದೆ. ಲಷ್ಕರ್-ಎ-ತೊಯ್ಬಾ ಉಗ್ರ ಟಿ.ನಾಸೀರ್‌ನನ್ನು ಕೋರ್ಟ್‌ಗೆ ಕರೆದುಕೊಂಡು ಹೋಗುವ ವೇಳೆ ತಯಾರಿಸಲಾಗಿದ್ದ ಎಸ್ಕೇಪ್ ಪ್ಲಾನ್ ಬಹಿರಂಗವಾಗಿದೆ. ಈ ಕುರಿತು ಎನ್‌ಐಎ ಅಧಿಕಾರಿಗಳ ತನಿಖೆಯ ಮಾಹಿತಿ ಕೋರ್ಟ್ ಮುಂದೆ ಬಹಿರಂಗವಾಗಿದೆ.

ಟಿ.ನಾಸೀರ್ ಎಸ್ಕೇಪ್ ಪ್ಲಾನ್; ಮೂವರು ಪ್ರಮುಖ ಆರೋಪಿಗಳು ಬಂಧನ

ಈ ಶಾಕ್ ಪ್ಲಾನ್‌ನ ಹಿಂದೆ ಐಎಎಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಚಾನ್ ಪಾಷಾ, ಟಿ.ನಾಸೀರ್‌ಗೆ ಸತತ ಸಂಪರ್ಕದಲ್ಲಿದ್ದ ಅನಿಸಾ ಪಾತಿಮಾ, ಹಾಗೂ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ನಾಗರಾಜ್ ಎಂಬ ಮೂವರು ಪ್ರಮುಖ ಆರೋಪಿಗಳನ್ನು ಎನ್‌ಐಎ ಬಂಧಿಸಿದೆ. ಇವರನ್ನು ಹೆಚ್ಚಿನ ವಿಚಾರಣೆಗಾಗಿ 6 ದಿನಗಳ ಕಾಲ ಎನ್‌ಐಎ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಜುನೈದ್ ಬೆಂಬಲದಿಂದ ಪ್ಲಾನ್?

ವಿದೇಶದಲ್ಲಿ ತಲೆಮರೆಸಿಕೊಂಡಿರುವ ಮೋಸ್ಟ್ ವಾಂಟೆಡ್ ಉಗ್ರ ಜುನೈದ್ ಈ ಪ್ಲಾನ್‌ನ ಪ್ರಮುಖ ಮುಂದಾಳು ಆಗಿದ್ದಾನೆ. ತನಿಖೆಯಲ್ಲಿ ಅನಿಸಾ ಪಾತಿಮಾ ಟಿ.ನಾಸೀರ್ ಜೊತೆ ಸಿಗ್ನಲ್ ಆ್ಯಪ್ ಮೂಲಕ ನಿರಂತರ ಸಂಪರ್ಕದಲ್ಲಿದ್ದದ್ದು ದೃಢಪಟ್ಟಿದೆ. ಈ ಪ್ಲಾಟ್‌ಫಾರ್ಮ್‌ಗಳ ಬಳಕೆ ಮಾಡಿದ ಕಾರಣದಿಂದ ಪತ್ತೆಯಾಗಿಲ್ಲ ಎನ್ನಲಾಗಿದೆ. ಸಿಎಆರ್ ಪಡೆಯಲ್ಲಿ ಎಎಸ್‌ಐ ಆಗಿದ್ದ ಚಾನ್ ಪಾಷಾ, ಟಿ.ನಾಸೀರ್‌ಗೆ ಬೇಕಾದ ಸಿಬ್ಬಂದಿಗಳನ್ನು ಕೋರ್ಟ್ ಎಸ್ಕಾರ್ಟ್‌ಗೆ ನೇಮಿಸುತ್ತಿದ್ದನು. ನಾಸೀರ್‌ನಿಂದ ಹಣ ಪಡೆದು, ಈ ಕಾರ್ಯವೈಖರಿಯಿಂದ ಆತ ತನ್ನ ಮಗನ ಖಾತೆಗೆ ಲಕ್ಷಾಂತರ ರೂಪಾಯಿ ಜಮೆ ಮಾಡಿಕೊಂಡಿರುವುದೂ ಪತ್ತೆಯಾಗಿದೆ.

ಡಾ.ನಾಗರಾಜ್ ಜೈಲಿನೊಳಗಿನ ತಂತ್ರಗಾರ

2012 ರಿಂದ ಜೈಲಿನಲ್ಲಿ ಮನೋವೈದ್ಯರಾಗಿ ಕೆಲಸ ಮಾಡುತ್ತಿದ್ದ ಡಾ.ನಾಗರಾಜ್‌, ಜೈಲಿನೊಳಗಿದ್ದ ನಾಸೀರ್ ಸೇರಿದಂತೆ ಅಪರಾಧಿಗಳಿಗೆ ಅಕ್ರಮವಾಗಿ ಮೊಬೈಲ್ ಸಪ್ಲೈ ಮಾಡುತ್ತಿದ್ದನು. ತನಿಖೆಯಲ್ಲಿ 300 ಕ್ಕೂ ಅಧಿಕ ಅಕ್ರಮ ಮೊಬೈಲ್ ಜೈಲಿನೊಳಗಿನ ಖೈದಿಗಳಿಗೆ ಮಾಡಿದ ಆರೋಪವಿದೆ. ಡಾ.ನಾಗರಾಜ್ ಈ ಮೂಲಕ ₹70 ಲಕ್ಷಕ್ಕೂ ಹೆಚ್ಚು ಸಂಪಾದನೆ ಮಾಡಿಕೊಂಡಿದ್ದಾರೆ. ಈ ಮೊಬೈಲ್‌ಗಳನ್ನು ಇಪ್ಪತ್ತು ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಿದ್ದಾರೆಂಬ ದೂರು ಇದೆ. ಈ ಮೊಬೈಲ್‌ಗಳ ಖರೀದಿ ವಿವರಗಳು ಹಾಗೂ 80ಕ್ಕೂ ಹೆಚ್ಚು ಡಿಜಿಟಲ್ ಸಾಕ್ಷ್ಯಗಳನ್ನು ಎನ್‌ಐಎ ಪಡೆದುಕೊಂಡಿದೆ.

ಪಾತಿಮಾ, ಜುನೈದ್ ಮತ್ತು ನಾಸೀರ್ ನಡುವೆ ಸಂಪರ್ಕ ಸೇತುವೆ:

ಜುನೈದ್‌ನ ತಾಯಿಯಾಗಿರುವ ಅನಿಸಾ ಪಾತಿಮಾ, ಜುನೈದ್ ಮತ್ತು ಜೈಲಿನಲ್ಲಿರುವ ನಾಸೀರ್ ನಡುವೆ ಸಂಪರ್ಕ ಕೊಂಡಿಯಾಗಿದ್ದುಕೊಂಡಿದ್ದರು. ನಾಸೀರ್‌ನಿಂದ ಮಾಹಿತಿಗಳನ್ನು ಪಡೆದು, ಅವಶ್ಯಕ ವಸ್ತುಗಳನ್ನು ಒಳಗೆ ಪೂರೈಸುತ್ತಿದ್ದಳು. ಸನ್ಮಾನ್ ಎಂಬ ಮತ್ತೊಬ್ಬನ ಮೂಲಕ ಜಾಹೀದ್ ತಬರೇಜ್‌ಗಾಗಿ ಹ್ಯಾಂಡ್ ಗ್ರೆನೇಡ್‌ಗಳ ಸಾಗಣೆ ಕೂಡ ನಡೆಸಲಾಗಿತ್ತೆಂದು ಮಾಹಿತಿ ಲಭ್ಯವಾಗಿದೆ. ಬಂಧಿತ ಮೂವರಿಂದ ಎನ್‌ಐಎ ಡಿಜಿಟಲ್ ಸಾಕ್ಷ್ಯಗಳು, ಸಿಡಿಆರ್, ಐಪಿಡಿಆರ್, ಸಂಪರ್ಕಗಳ ಮಾಹಿತಿ ಸೇರಿ, ಮೊಬೈಲ್‌ಗಳಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿದೆ.

Related Video