ಜಮ್ಮು ಕಾಶ್ಮೀರ ಸೇನಾ ವಾಹನ ದುರಂತದಲ್ಲಿ 5 ಯೋಧರ ಹುತಾತ್ಮ; ಈ ಪೈಕಿ ಮೂವರು ಕರ್ನಾಟಕದ ಯೋಧರು!
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನವೊಂದು ಕಮರಿಗೆ ಉರುಳಿ ಐವರು ಯೋಧರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ. ಮೃತ ಯೋಧರಲ್ಲಿ ಮೂವರು ಕರ್ನಾಟಕ ಮೂಲದವರು.
ದೆಹಲಿ/ಬೆಂಗಳೂರು (ಡಿ.25): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧಾರ್‌ನ ಬಲ್ನೋಯಿ ಪ್ರದೇಶದಲ್ಲಿ ಮಂಗಳವಾರ ಸೇನಾ ವಾಹನವೊಂದು ಕಮರಿಗೆ ಉರುಳಿದ ಪರಿಣಾಮ ಐವರು ಯೋಧರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ. ಆದರೆ, ಈ ಮೃತ ಯೋಧರ ಪೈಕಿ ಬೆಳಗಾವಿ, ಬಾಗಲಕೋಟೆ ಹಾಗೂ ಉಡುಪಿ ಮೂಲದ ಮೂವರು ಯೋಧರು ಕರ್ನಾಕದವರೇ ಸಾವಿಗೀಡಾಗಿರುದು ರಾಜ್ಯದ ಜನತೆ ಮಮ್ಮಲ ಮರುವಂತೆ ಮಾಡಿದೆ.
ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಯೋಧ ದಯಾನಂದ ತಿರಕಣ್ಣವರ (45), ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಿವಾಸಿ ಮಹೇಶ್ ನಾಗಪ್ಪ ಮಾರಿಗೊಂಡ (25) ಹಾಗೂ ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು ಬಿಜಾಡಿ ಗ್ರಾಮದ ಯೋಧ ಅನೂಪ್ (33) ಹುತಾತ್ಮಗೊಂಡ ಯೋಧರಾಗಿದ್ದಾರೆ. ಭಾರತೀಯ ಸೇನೆಯ 11 ಮದ್ರಾಸ್ ಲೈಟ್ ಇನ್‌ಫೆಂಟ್ರಿ (11 ಎಂಎಲ್‌ಐ) ಗೆ ಸೇರಿದ ವಾಹನವು ನಿಲಂ ಪ್ರಧಾನ ಕಛೇರಿಯಿಂದ ಬಲ್ನೋಯಿ ಘೋರಾ ಪೋಸ್ಟ್‌ಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇನ್ನು ಈ ಸೇನಾವಾಹನದಲ್ಲಿ ಮೃತರ ಪೈಕಿ 5 ಜನರಲ್ಲಿ ಬಹುಪಾಲು ನಮ್ಮ ಕನ್ನಡ ನಾಡಿನವರೇ ಎನ್ನುವುದು ಕನ್ನಡಿಗರಿಗೆ ಅತೀವ ನೋವು ತರಿಸುವ ಘಟನೆಯಾಗಿದೆ.
ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಯೋಧರ ಕಳೇಬರಹಗಳನ್ನು ಸ್ವಗ್ರಾಮಕ್ಕೆ ತರಲಾಗುತ್ತಿದೆ. ಇಲ್ಲಿ ಯೋಧರ ಗ್ರಾಮದಲ್ಲಿ ಅಂತಿಮ ವಿಧಿ-ವಿಧಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.