ಶ್ರೀಲಂಕಾ ಪರಿಸ್ಥಿತಿ ಎದುರಿಸುವಾಗ ಜಾಗರೂಕತೆ ಅಗತ್ಯ, ಚೀನಾ ಕುತಂತ್ರ ಸೂಚನೆ ನೀಡಿದ ಮಾಜಿ ಭಾರತದ ರಾಯಭಾರಿ!

ಶ್ರೀಲಂಕಾದಲ್ಲಿನ ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟು, ಈ ಪರಿಸ್ಥಿತಿಯನ್ನು ಭಾರತ ಎದುರಿಸುತ್ತಿರುವ ರೀತಿ ಜೊತೆಗೆ ಚೀನಾದ ಕುತಂತ್ರಗಳ ಕುರಿತು ಭಾರತದ ಮಾಜಿ ರಾಯಭಾರಿ ವೇಣು ರಾಜಾಮೋನಿ ಬಿಚ್ಚಿಟ್ಟಿದ್ದಾರೆ. ಏಷ್ಯಾನೆಟ್ ನ್ಯೂಸ್ ನೆಟ್‌ವರ್ಕ್ ಜೊತೆ ನಡೆಸಿದ ಸಂವಾದ ವಿಶೇಷ ಕಾರ್ಯಕ್ರಮ ಇಲ್ಲಿದೆ.
 

First Published Jul 17, 2022, 7:39 PM IST | Last Updated Jul 17, 2022, 7:39 PM IST

ನವದೆಹಲಿ(ಜು.17): ಶ್ರೀಲಂಕಾದಲ್ಲಿನ ಅಸ್ಥಿರತೆ, ರಾಜಕೀಯ, ಆರ್ಥಿಕ ಬಿಕ್ಕಟ್ಟು ತಾರಕಕ್ಕೇರಿದೆ. ಅಧ್ಯಕ್ಷರು ಪರಾರಿಯಾಗಿದ್ದರೆ, ಪ್ರತಿಭಟನೆ ಕಾವು ಇನ್ನೂ ನಿಂತಿಲ್ಲ. ಲಂಕಾದ ಪರಿಸ್ಥಿತಿ ಅರಿತು ಭಾರತ ನೆರವಿನ ಹಸ್ತ ಚಾಚಿದೆ. ಆದರೆ ಭಾರತ ಅತ್ಯಂತ ಜಾಗರೂಕವಾಗಿ ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಭಾರತದ ನೆದರ್ಲೆಂಡ್ ರಾಯಭಾರಿ, ಪ್ರಸಕ್ತ ಕೇರಳ ಸರ್ಕಾರದ ವಿದೇಶಿ ಸಹಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ವೇಣು ರಾಜಾಮೋನಿ ಹೇಳಿದ್ದಾರೆ.  ಏಷ್ಯಾನೆಟ್ ನ್ಯೂಸ್ ನಡೆಸಿದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ವೇಣು ರಾಜಾಮೋನಿ ಲಂಕಾ ಸಮಸ್ಯೆಯಲ್ಲಿ ಚೀನಾದ ಪಾತ್ರ ಹಾಗೂ ಭಾರತದ ಎಚ್ಚರಿಕೆ ಕುರಿತು ವಿವರಿಸಿದ್ದಾರೆ. 

ಭಾರತ ಸರ್ಕಾರ ನಾವು ಶ್ರೀಲಂಕಾ ಜನರ ಜೊತೆ ಇದ್ದೇವೆ ಎಂದಿದೆ. ಈ ಮೂಲಕ ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕನ ಜೊತೆಗಿಲ್ಲ ಅನ್ನೋ ಸಂದೇಶವನ್ನು ಸಾರಿದೆ. ಇದು ಅತ್ಯಂತ ಮುಖ್ಯ. ಕಾರಣ ನಾಳೆ ಶ್ರೀಲಂಕಾದಲ್ಲಿ ಇನ್ಯಾರೋ ಅಧಿಕಾರಕ್ಕೆ ಬರಬಹುದು. ಈ ವೇಳೆ ಇದು ಭಾರತದ ಅಭ್ಯರ್ಥಿ, ಭಾರತದ ಬೆಂಬಲದಿಂದ ಸರ್ಕಾರ ರಚನೆಯಾಗಿದೆ ಅನ್ನೋ ಆರೋಪ ಸಹಜ. ಒಂದ ವೇಳೆ ಆ ಅಭ್ಯರ್ಥಿ ಅಧಿಕಾರಕ್ಕೆ ಬರದೇ ಹೋದರೆ, ಭಾರತ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿ ತನ್ನ ಲಾಭ ನೋಡಿಕೊಳ್ಳುತ್ತಿದೆ ಅನ್ನೋ ಆರೋಪ ಕೇಳಿಬರುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಜನರ ಜೊತೆಗೆ ನಿಲ್ಲುತ್ತೇವೆ ಅನ್ನೋ ಸಂದೇಶ ಅತ್ಯಂತ ಮುಖ್ಯ. ಇದರಂತೆ ಭಾರತ ಸರ್ಕಾರ ನೆರವು ನೀಡಿದೆ. ಇದರ ಜೊತೆ ರಾಜತಾಂತ್ರಿಕ ಸಂಬಂಧ, ಚೀನಾದ ಹಸ್ತಕ್ಷೇಪದ ಕಾರಣ ಭಾರತ ಈ ಪರಿಸ್ಥಿತಿಯನ್ನು ಅತ್ಯಂತ ಜಾಗರೂಕತೆಯಿಂದ ನಿಭಾಯಿಸಬೇಕು ಎಂದು ವೇಣು ರಾಜಾಮೋನಿ ಹೇಳಿದ್ದಾರೆ. ಸಾಲದ ಮೇಲೆ ಸಾಲ ನೀಡಿ ಶ್ರೀಲಂಕಾವನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದ ಚೀನಾ ಇದೀಗ ಲಂಕಾದಿಂದ ದೂರ ಉಳಿದಿದೆ. ಕಾರಣ ಚೀನಾ ಆಪ್ತ ಗೊಟಬಯ ರಾಜಪಕ್ಸ ಅಧಿಕಾರಕ್ಕೆ ಬರುವ ಸಾಧ್ಯತೆ ಕಡಿಮೆ. ಹೀಗಾಗಿ ದೂರ ಉಳಿದುಕೊಂಡಿದೆ. ಯಾರೇ ಅಧಿಕಾರಕ್ಕೆ ಬಂದರೂ ಹಿಂದಿನ ಸಾಲ, ಒಪ್ಪಂದ ಸೇರಿದಂತೆ ಹಲವು ನಿಬಂಧನೆಗಳ ಮೂಲಕ ಹೊಸ ಸರ್ಕಾರವನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳಲಿದೆ ಎಂದು ವೇಣು ಸಂದರ್ಶನದಲ್ಲಿ ಹೇಳಿದ್ದಾರೆ.