ಭ್ರಷ್ಟಾಚಾರ, ನಿರುದ್ಯೋಗ ಮುಕ್ತ, ರೈತ ಸ್ನೇಹಿ ಸರ್ಕಾರ ನೀಡುತ್ತೇವೆ: ಪಂಜಾಬ್ ಸಿಎಂ ಮಾನ್ ಭರವಸೆ
ಆಮ್ ಆದ್ಮಿ ಪಕ್ಷದ ನಾಯಕ ಭಗವಂತ ಮಾನ್ ಪಂಜಾಬಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ರಾಜ್ಯದಲ್ಲಿ ಮೊದಲ ಬಾರಿ ಕಾಂಗ್ರೆಸ್ ಹಾಗೂ ಅಕಾಲಿದಳ ಹೊರತಾದ ಪಕ್ಷ ಅಧಿಕಾರಕ್ಕೆ ಬಂದಂತಾಗಿದೆ.
ಚಂಡೀಗಢ (ಮಾ. 17): ಆಮ್ ಆದ್ಮಿ ಪಕ್ಷದ ನಾಯಕ ಭಗವಂತ ಮಾನ್ ಪಂಜಾಬಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ರಾಜ್ಯದಲ್ಲಿ ಮೊದಲ ಬಾರಿ ಕಾಂಗ್ರೆಸ್ ಹಾಗೂ ಅಕಾಲಿದಳ ಹೊರತಾದ ಪಕ್ಷ ಅಧಿಕಾರಕ್ಕೆ ಬಂದಂತಾಗಿದೆ.
ಈ ವೇಳೆ ದೆಹಲಿಯ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿಯ ಸಚಿವರಾದ ಸತ್ಯೇಂದ್ರ ಜೈನ್, ಹಾಗೂ ಪಂಜಾಬಿನ ಚುನಾವಣೆಯಲ್ಲಿ ಗಲುವು ಸಾಧಿಸಿದ ವಿಧಾನಸಭಾ ನಾಯಕರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪಾಲ್ಗೊಂಡ ಎಲ್ಲ ಪುರುಷರು ಹಳದಿ ಪೇಟ ಹಾಗೂ ಮಹಿಳೆಯರು ಹಳದಿ ದುಪಟ್ಟಾ ಧರಿಸಿ ಬಂದಿದ್ದು ವಿಶೇಷವಾಗಿತ್ತು.
ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿದ ಮಾನ್ ‘ನಮ್ಮ ಸರ್ಕಾರವು ನಿರುದ್ಯೋಗ, ಭ್ರಷ್ಟಾಚಾರ ಹಾಗೂ ಪಂಜಾಬಿನಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ. ಈ ದಿಸೆಯಲ್ಲಿ ಇಂದಿನಿಂದಲೇ ಕಾರ್ಯವನ್ನು ಆರಂಭಿಸಲಾಗುವುದು’ ಎಂದರು.