14 ಜಾನುವಾರು ತಿಂದು ತೇಗಿ ಜನರ ನಿದ್ದೆಗಿಡಿಸಿದ ಹುಲಿ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು!
ಎಲ್ಲಿ ಹುಲಿ ದಾಳಿ ಮಾಡುತ್ತೋ ಆನ್ನೋ ಆತಂಕ, ಸಂಜೆಯಾದರೆ ಸಾಕು ಜನರು ತಮ್ಮ ತಮ್ಮ ಜಾನುವಾರುಗಳನ್ನು ರಕ್ಷಿಸುವುದೇ ಹರಸಾಹಸವಾಗಿತ್ತು. ಕಾರಣ ಈ ಹುಲಿಯ ದಾಳಿ 14 ಹಸುಗಳು ಬಲಿಯಾಗಿದೆ. ಕೊನೆಗೂ ಈ ಹುಲಿಯನ್ನು ಸೆರೆ ಹಿಡಿಯಲಾಗಿದೆ.
ವಯನಾಡು(ಅ.28): ಒಂದಲ್ಲ ಎರಡಲ್ಲ ಬರೋಬ್ಬರಿ 14 ಹಸುಗಳ ಬಕ್ಷಿಸಿದ ಹುಲಿ ಕಳೆದ ಒಂದು ತಿಂಗಳಿನಿಂದ ವಯನಾಡು ಜನತೆಯನ್ನು ನಿದ್ದಿಗೆಡಿಸಿತ್ತು. ಜಿಲ್ಲಾಡಳಿತ, ಆರಣ್ಯಾಧಿಕಾರಿಗಳು, ಪೊಲೀಸರು ಸೇರಿದಂತೆ ಇಡೀ ತಂಡ ಈ ಹುಲಿ ಸೆರೆ ಹಿಡಿಯಲು ಒಂದು ತಿಂಗಳಿನಿಂದ ಸತತ ಪ್ರಯತ್ನ ನಡೆಸುತ್ತಿತ್ತು. ಕೊನೆಗೆ ಸಿಹಿ ಸುದ್ದಿ ಸಿಕ್ಕಿದೆ. ಒಂದು ತಿಂಗಳ ಬಳಿಕ ಹುಲಿಯನ್ನು ಸೆರೆ ಹಿಡಿಯಲಾಗಿದೆ. 12 ವರ್ಷ ಪ್ರಾಯದ ಗಂಡು ಹುಲಿ ಇದೀಗ ಅರಣ್ಯಾಧಿಕಾರಿಗಳ ವಶದಲ್ಲಿದೆ. ಮುತಂಗ ಕಾಡು ಹಾಗೂ ಕಾಡಿನಂಚಿನ ಗ್ರಾಮದಲ್ಲಿ ಸಂಚರಿಸಿ ಕ್ಷಣ ಕ್ಷಣಕ್ಕೂ ಆತಂಕದ ವಾತಾವರಣ ಸೃಷ್ಟಿಸಿದ ಹುಲಿಯನ್ನು ಸೆರೆ ಹಿಡಿಯುತ್ತಿದ್ದಂತೆ ಗ್ರಾಮಸ್ಥರಲ್ಲಿ ಸಂತಸ ಮನೆ ಮಾಡಿದೆ.