ವಸುದೈವ ಕುಟುಂಬಕಂ ಜಾತಿ-ಧರ್ಮಗಳಿಗೆ ಸೀಮಿತವಲ್ಲ, ಪ್ರಕೃತಿಗೂ ಅನ್ವಯ: ರಿಕ್ಕಿ ಕೇಜ್
Ricky Kej on Asianet News Samvad: ಸಂಗೀತ ಕ್ಷೇತ್ರದ ದಿಗ್ಗಜ, ಕನ್ನಡಿಗ, ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿರುವ ಖ್ಯಾತ ಸಂಗೀತ ಸಂಯೋಜಕ ರಿಕ್ಕಿ ಕೇಜ್ ಸಂದರ್ಶನ
ಬೆಂಗಳೂರು (ಜು. 31): ಸಂಗೀತ ಕ್ಷೇತ್ರದ ದಿಗ್ಗಜ, ಕನ್ನಡಿಗ, ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿರುವ ಖ್ಯಾತ ಸಂಗೀತ ಸಂಯೋಜಕ ರಿಕ್ಕಿ ಕೇಜ್ (Ricky Kej) ಏಷಿಯಾನೆಟ್ ಸುವರ್ಣ ನ್ಯೂಸ್‌ನ ವಿಶೇಷ ಸಂದರ್ಶನ ಕಾರ್ಯಕ್ರಮ ಸಂವಾದಲ್ಲಿ (Samvad) ತಮ್ಮ ಸಂಗೀತ ವೃತ್ತಿಜೀವನ ಮತ್ತು ತಮ್ಮ ಜೀವನದ ಅತ್ಯುತ್ತಮ ಸಾಧನೆಯ ಬಗ್ಗೆ ಮಾತನಾಡಿದರು. ಪ್ರಾಣಿಗಳು, ಪ್ರಕೃತಿ, ಪ್ರೀತಿ, ಪ್ರಯಾಣಕ್ಕೆ ಸಂಬಂಧಿಸಿದ ತಮ್ಮ ಹಾಡುಗಳ ಬಗ್ಗೆ ಮಾತನಾಡಿದ ಅವರು "ವಸುದೈವ ಕುಟುಂಬಕಂ ಜಾತಿ-ಧರ್ಮಗಳಿಗೆ ಸೀಮಿತವಲ್ಲ, ಪ್ರಕೃತಿಗೂ ಅನ್ವಯ" ಎಂದರು.
ನನ್ನ ಸಂಗೀತದಿಂದ ನೀವು ನನ್ನನ್ನು ಅರ್ಥಮಾಡಿಕೊಳ್ಳಬಹುದು ಎಂದ ರಿಕಿ "ನನ್ನ ಸಂಗೀತ ನನ್ನನ್ನು ಒಬ್ಬ ವ್ಯಕ್ತಿಯನ್ನಾಗಿ ಗುರುತಿಸುತ್ತದೆ" ಎಂದರು. ರಿಕಿ ಕೇಜ್ ಭಾರತದಲ್ಲಿನ ಶಾಸ್ತ್ರೀಯ ಸಂಗೀತದ ಜೊತೆಗೆ ಭಾರತದ ಸಾಂಪ್ರದಾಯಿಕ ಸಂಗೀತ ಕಲಾ ಪ್ರಕಾರಗಳ ಬಗ್ಗೆ ಮಾತನಾಡಿದರು. ಬಂಗಾಳದಲ್ಲಿ ಬೌಲ್ ಸಂಗೀತದೊಂದಿಗೆ (Baul Music) ಕೆಲಸ ಮಾಡಿದ್ದರ ಬಗ್ಗೆ ಮಾತನಾಡಿದ ರಿಕಿ ಚಲನಚಿತ್ರವೊಂದನ್ನು ಪೂರ್ಣಗೊಳಿಸಲು 4 ವರ್ಷಗಳನ್ನು ತೆಗೆದುಕೊಂಡಿದ್ದರ ಬಗ್ಗೆ ತಿಳಿಸಿದರು.
ರಿಕಿ ಕೇಜ್ ‘ಡಿವೈನ್ ಟೈಡ್ಸ್’ ಆಲ್ಬಮ್‌ಗೆ ಗ್ರ್ಯಾಮಿ ಪ್ರಶಸ್ತಿ: ಬೆಂಗಳೂರಿನ ಪ್ರಸಿದ್ಧ ಸಂಯೋಜಕ ರಿಕಿ ಕೇಜ್ ಜಾಗತಿಕ ಸಂಗೀತ ಲೋಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯೆಂದು ಖ್ಯಾತಿ ಪಡೆದಿರುವ ಗ್ರ್ಯಾಮಿ ಪ್ರಶಸ್ತಿಯನ್ನು 2ನೇ ಬಾರಿ ತಮ್ಮದಾಗಿಸಿಕೊಳ್ಳುವ ಮೂಲಕ ಮಹತ್ಸಾಧನೆ ಮೆರೆದಿದ್ದಾರೆ. ಖ್ಯಾತ ಬ್ರಿಟಿಷ್ ಡ್ರಮ್ಮರ್ ಸ್ಟೆವಾರ್ಟ್ ಕೋಪ್‌ಲ್ಯಾಂಡ್ ಜೊತೆ ಸೇರಿ ರಿಕಿ ಕೇಜ್ ಸಂಯೋಜಿಸಿರುವ ‘ಡಿವೈನ್ ಟೈಡ್ಸ್’ ಎಂಬ ಒಂಭತ್ತು ಗೀತೆಗಳ ಆಲ್ಬಮ್‌ಗೆ ಅತ್ಯುತ್ತಮ ನ್ಯೂ ಏಜ್ ಆಲ್ಬಮ್ ವಿಭಾಗದಲ್ಲಿ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.
ಲಾಸ್ ವೆಗಾಸ್‌ನ ಎಂಜಿಎಂ ಗ್ರ್ಯಾಂಡ್ ಮಾಕ್ರ್ಯೂ ಬಾಲ್‌ರೂಮ್‌ನಲ್ಲಿ ಸೋಮವಾರ ನಡೆದ 64ನೇ ಗ್ರ್ಯಾಮಿ ಅವಾರ್ಡ್ಸ್ ಸಮಾರಂಭದಲ್ಲಿ ರಿಕಿ ಕೇಜ್ ಮತ್ತು ಸ್ಟೆವಾರ್ಟ್ ಕೋಪ್‌ಲ್ಯಾಂಡ್ ಜಂಟಿಯಾಗಿ ಪ್ರಶಸ್ತಿ ಸ್ವೀಕರಿಸಿದರು. 2015ರಲ್ಲಿ ತಮ್ಮ ‘ವಿಂಡ್ಸ್ ಆಫ್ ಸಂಸಾರ’ ಆಲ್ಬಮ್‌ಗೆ ಇದೇ ವಿಭಾಗದಲ್ಲಿ ರಿಕಿ ಕೇಜ್ ಮೊದಲ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು.
ಏಷ್ಯಾನೆಟ್ ತಂಡದೊಂದಿಗೆ ಗ್ರ್ಯಾಮಿ ವಿಜೇತ: ಸಂಗೀತವನ್ನು ನೋಡುವ ದೃಷ್ಟಿಕೋನ ಬದಲಾಗಬೇಕು ಎಂದ ರಿಕ್ಕಿ ಕೇಜ್
ಅಮೆರಿಕದ ನಾರ್ತ್ ಕೆರೋಲಿನಾದಲ್ಲಿ ಭಾರತೀಯ ದಂಪತಿಗೆ 1981ರಲ್ಲಿ ಜನಿಸಿದ ರಿಕಿ ಕೇಜ್ ತಮ್ಮ 8ನೇ ವಯಸ್ಸಿನಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆಕ್ಸ್‌ಫರ್ಡ್ ಕಾಲೇಜಿನಿಂದ ದಂತ ವೈದ್ಯಕೀಯ ಪದವಿ ಪಡೆದಿರುವ ಇವರು ದಂತವೈದ್ಯರಾಗಿ ಕೆಲಸ ಮಾಡದೆ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು 30ಕ್ಕೂ ಹೆಚ್ಚು ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.
ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ವಿಶ್ವಸಂಸ್ಥೆಯ ಜೊತೆಗೂ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ 2003ರಿಂದ ‘ರೆವೊಲ್ಯೂಷನ್’ ಹೆಸರಿನ ಸ್ವಂತ ಸ್ಟುಡಿಯೋ ಹೊಂದಿದ್ದಾರೆ. 3000ಕ್ಕೂ ಹೆಚ್ಚು ಜಾಹೀರಾತು ಜಿಂಗಲ್‌ಗಳನ್ನು ರೂಪಿಸಿರುವ ಅವರು, ಕೆಲ ಕನ್ನಡದ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ.