ಡಿ-ಗ್ಯಾಂಗ್‌ನ ನಂದೀಶ್‌ಗಿಲ್ಲ ಜಾಮೀನು! ಕುಟುಂಬಸ್ಥರು ಈ ಬಗ್ಗೆ ಹೇಳೋದೇನು?
ಚಿತ್ರುದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ 7 ಜನರಿಗೆ ಹೈಕೋರ್ಟ್ ಜಾಮೀನು ನೀಡಿದೆ. ದರ್ಶನ್‌ಗೆ ಶಸ್ತ್ರಚಿಕಿತ್ಸೆಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಆದರೆ ನಂದೀಶ್ ಗೆ ಜಾಮೀನು ಸಿಕ್ಕಿಲ್ಲ.
ಚಿತ್ರುದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ಸೇರಿದಂತೆ ಇತರೆ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ನೀಡಿದೆ. ಪ್ರಕರಣದ ಆರೋಪಿಗಳಾಗಿರುವ ನಟ ದರ್ಶನ್, ಆತನ ಗೆಳತಿ ಪವಿತ್ರಾ ಗೌಡ, ಮ್ಯಾನೇಜರ್ ಆರ್.ನಾಗರಾಜು, ದರ್ಶನ್ ಕಾರು ಚಾಲಕ ಎಂ.ಲಕ್ಷ್ಮಣ್, ಆಪ್ತರಾದ ಅನುಕುಮಾರ್, ಜಗದೀಶ್ ಮತ್ತು ಪ್ರದೋಷ್ ರಾವ್ ಅವರ ಜಾಮೀನು ಸಿಕ್ಕಿದೆ.
ಬೆನ್ನುಹುರಿ ಸಮಸ್ಯೆಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ದರ್ಶನ್‌ಗೆ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿ ಹೈಕೊರ್ಟ್ ಅ.30ರಂದು ಆದೇಶಿಸಿತ್ತು. ದರ್ಶನ್ ಆಸ್ಪತ್ರೆಗೆ ದಾಖಲಾಗಿದ್ದು, ಡಿ.11ರಂದು (ಬುಧವಾರ) ದರ್ಶನ್‌ಗೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಲಿದ್ದಾರೆ ಎಂಬುದಾಗಿ ಅವರ ಪರ ವಕೀಲರು ಡಿ.9ರಂದು ಕೋರ್ಟ್‌ಗೆ ತಿಳಿಸಿದ್ದರು. ಅಂದೇ ಜಾಮೀನುಗಳ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸುವವರೆಗೆ ಮಧ್ಯಂತರ ಜಾಮೀನನ್ನು ನ್ಯಾಯಾಲಯವು ವಿಸ್ತರಿಸಿತ್ತು.
ನಟ ದರ್ಶನ್ ನಂಬಿ ಇದೀಗ ಎ5 ಆರೋಪಿಯಾಗಿ ಜೈಲು ಸೇರಿರುವ ನಂದೀಶ್ ಆತನ ಕುಟುಂಬಕ್ಕೆ ಆಸರೆಯಾಗಿದ್ದವನು. ಈಗ ಜೈಲು ಸೇರಿರುವ ಆತನನ್ನು ನೋಡಿಕೊಂಡು ಬರಲೂ ಕುಟುಂಬದ ಬಳಿ ಹಣ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದೆ. ದಾಸನನ್ನು ನಂಬಿ ಜೈಲು ಪಾಲಾಗಿರುವ ಪ್ರಕರಣದ ಎ5 ಆರೋಪಿ ನಂದೀಶ್ ಕುಟುಂಬಸ್ಥರ ಆತಂಕ ಹೆಚ್ಚಾಗಿದೆ. ನಂದೀಶ್ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿಯೇ ಸಲ್ಲಿಸಿಲ್ಲ. ಆತನ ಕುಟುಂಬದವರೀಗ ದರ್ಶನ್ ನೆರವಿಗಾಗಿ ಹಾತೊರೆಯುತ್ತಿದ್ದಾರೆ.