ಸಾಲಬಾಧೆ: ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆ ಯತ್ನ, ಮಹಿಳೆ ಸಾವು, 6 ಮಂದಿ ಚಿಂತಾಜನಕ
ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 7 ಮಂದಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆ ಪೈಕಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಅಸ್ವಸ್ಥರಾಗಿರುವ 6 ಮಂದಿಯನ್ನು ಮಂಡ್ಯದ ವಿಮ್ಸ್‌ಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ.
ರಾಮನಗರ (ಫೆ.03): ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 7 ಮಂದಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆ ಪೈಕಿ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಅಸ್ವಸ್ಥರಾಗಿರುವ 6 ಮಂದಿಯನ್ನು ಮಂಡ್ಯದ ವಿಮ್ಸ್‌ಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಗ್ರಾಮದ ಮಂಗಳಮ್ಮ (28) ಮೃತ ಮಹಿಳೆ. ಆಕೆಯ ಪತಿ ರಾಜು (31), ಆಕೆಯ ತಾಯಿ ಸೊಮ್ಮಪುರದಮ್ಮ (48), ಮಕ್ಕಳಾದ ಆಕಾಶ್ (9), ಕೃಷ್ಣ (13), ಮಂಗಳಮ್ಮನ ಸಹೋದರಿ ಸವಿತಾ (24), ಸವಿತಾ ಪುತ್ರಿ ದರ್ಶಿನಿ (4) ಅಸ್ವಸ್ಥರಾದವರು. ಬೆಂಗಳೂರಿನ ಸುಬ್ರಪ್ಪನಪಾಳ್ಯದಲ್ಲಿ ವಾಸವಾಗಿದ್ದ ರಾಜು, ಕೂಲಿ ಕಾರ್ಮಿಕನಾಗಿದ್ದು, 11 ಲಕ್ಷಕ್ಕೂ ಹೆಚ್ಚಿನ ಸಾಲ ಮಾಡಿಕೊಂಡಿದ್ದರು. ಇತ್ತೀಚೆಗೆ ಸಾಲಗಾರರ ಕಾಟ ಹೆಚ್ಚಾಗಿತ್ತು.
ಸಾಲಗಾರರಿಗೆ ಹೆದರಿ ಸುಬ್ರಪ್ಪನಪಾಳ್ಯ ಬಿಟ್ಟು ರಾಮನಗರದ ದೊಡ್ಡ ಮಣ್ಣುಗುಡ್ಡೆ ಗ್ರಾಮದಲ್ಲಿರುವ ಸೋದರತ್ತೆ ಮನೆಯಲ್ಲಿ ವಾಸವಿದ್ದರು. ಅಲ್ಲೂ ಸಾಲಕ್ಕೆ ಪೀಡಿಸುತ್ತಿದ್ದರಿಂದ ಬೇಸತ್ತು ಊಟಕ್ಕೆ ಇಲಿ ಪಾಷಾಣ ಬೆರೆಸಿದ್ದ. ಊಟ ಮಾಡಿ ಮಂಗಳಮ್ಮ ಮನೆಯಲ್ಲೇ ಮೃತಪಟ್ಟರು. ಉಳಿದವರು ಅಸ್ವಸ್ಥರಾದರು. ಮಧ್ಯಾಹ್ನ 2.30ರ ವೇಳೆ ಎಲ್ಲರೂ ಊಟ ಮಾಡಿದ್ದರು. ಊಟದ ಬಳಿಕ ಸಕ್ಕರೆ ಅಚ್ಚು, ಬಾಳೆ ಹಣ್ಣು ಸೇವಿಸಿದ್ದರು. ಸ್ವಲ್ಪ ಹೊತ್ತಿನ ಬಳಿಕ ಎಲ್ಲರೂ ಅಸ್ವಸ್ಥರಾಗಿದ್ದು, ಮಂಗಳಮ್ಮ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ವಿಷಯ ತಿಳಿದ ನೆರೆಹೊರೆಯವರು ತಕ್ಷಣವೇ ಅವರೆಲ್ಲರನ್ನೂ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್‌ಗೆ ದಾಖಲು ಮಾಡಲಾಯಿತು.