ಕನ್ನಡಕ್ಕೆ ಬರ್ತಾರಾ ವಿಶಾಲ್?: ಶಕ್ತಿಧಾಮಕ್ಕೆ ಭೇಟಿ ನೀಡಿ ಹೇಳಿದ್ದೇನು?
ಶಕ್ತಿಧಾಮದ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಯಾವಾಗಲೂ ಸಿದ್ಧವಿರುವುದಾಗಿ ತಮಿಳು ನಟ ವಿಶಾಲ್ ಹೇಳಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾದ ಸಂದರ್ಭದಲ್ಲಿ ಮಹಿಳೆಯರ ಪುನರ್ವಸತಿ ಕೇಂದ್ರ 'ಶಕ್ತಿಧಾಮದ' ಹೊಣೆ ಹೊರುವುದಾಗಿ ಹೇಳಿದ್ದ ತಮಿಳು ನಟ ವಿಶಾಲ್, ತದನಂತರ ಆ ಬಗ್ಗೆ ಮೌನ ವಹಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಮೌನವನ್ನು ಪ್ರಶ್ನಿಸಲಾಗುತಿತ್ತು. ಇದೀಗ ಆ ಬಗ್ಗೆ ಮೌನ ಮುರಿದಿರುವ ವಿಶಾಲ್, ಡಾ. ರಾಜ್ ಕುಮಾರ್ ಕುಟುಂಬದಿಂದ ಒಂದೇ ಒಂದು ಕರೆ ಬಂದರೂ ಸಾಕು, ಶಕ್ತಿಧಾಮದ ಮಕ್ಕಳ ಶಿಕ್ಷಣಕ್ಕೆ ನೆರವಾಗಲು ಯಾವಾಗಲೂ ಸಿದ್ಧವಿರುವುದಾಗಿ ಹೇಳಿದ್ದಾರೆ. ತಮ್ಮ 'ಲಾಠಿ' ಸಿನಿಮಾದ ಪ್ರಚಾರಕ್ಕಾಗಿ ನಗರಕ್ಕೆ ಆಗಮಿಸಿದ ಅವರು, ಶಕ್ತಿಧಾಮದ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುತ್ತಿದೆ. ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರ ಕಾರ್ಯವನ್ನು ಅವರ ಕುಟುಂಬ ಮುಂದುವರೆಸಿದೆ. 1,800 ಮಕ್ಕಳಿಗೆ ಬೆಳಕಾಗಿದೆ. ಅವರಿಗೆ ನೆರವಾಗಲು ಹಾಗೂ ನಟ ಪ್ರಕಾಶ್ ರಾಜ್ ಆರಂಭಿಸಿರುವ 'ಪುನೀತ್ ಆಂಬ್ಯುಲೆನ್ಸ್ ' ಯೋಜನೆಗಾಗಿ ಐದು ವಾಹನ ನೀಡುವುದಕ್ಕೆ ಸಿದ್ಧನಿದ್ದೇನೆ ಎಂದರು. ಇನ್ನು 2024ರ ವೇಳೆ ಕನ್ನಡದಲ್ಲೂ ಅಭಿನಯಿಸಲು ಉತ್ಸುಕನಾಗಿದ್ದೇನೆ ಎಂದು ವಿಶಾಲ್ ತಿಳಿಸಿದ್ದಾರೆ.