ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನ, ಸಚಿವರು ಹಾಗೂ ಸಚಿವಾಲಯಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಹತ್ವದ ಪರಿಶೀಲನಾ ಸಭೆ ನಡೆಸಲಿದ್ದಾರೆ.
ನವದೆಹಲಿ (ಸೆ.7): ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನ, ಸಚಿವರು ಹಾಗೂ ಸಚಿವಾಲಯಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಮಹತ್ವದ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಈ ಸಭೆಗೆ ಸಂಪುಟ ಸಚಿವರಲ್ಲದೆ, ರಾಜ್ಯ ಸಚಿವರು ಹಾಗೂ ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಸಚಿವರಿಗೂ ಆಹ್ವಾನ ನೀಡಲಾಗಿದ್ದು, ಸರ್ಕಾರದ ವಿವಿಧ ಇಲಾಖೆಗಳ ಸಾಧನೆಯನ್ನು ವಿಸ್ತೃತವಾಗಿ ಚರ್ಚಿಸಲಾಗುವುದು ಎಂದು ಆಂಗ್ಲ ಸುದ್ದಿವಾಹಿನಿಯೊಂದು ವರದಿ ಮಾಡಿದೆ.
ಕಾರ್ಯಕ್ಷಮತೆ ಪರಿಶೀಲನೆ:
ಶಿಕ್ಷಣ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ಆರೋಗ್ಯ, ನಗರಾಭಿವೃದ್ಧಿ ಹಾಗೂ ಕೃಷಿ ಸಚಿವಾಲಯ ಸೇರಿದಂತೆ ಹಲವು ಪ್ರಮುಖ ಇಲಾಖೆಗಳ ಕಾರ್ಯಕ್ಷಮತೆ ಈ ಪರಿಶೀಲನಾ ಸಭೆಯಲ್ಲಿ ಮುಖ್ಯವಾಗಿ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಸರ್ಕಾರದ ಯೋಜನೆಗಳ ಲಾಭವು ಯಾವುದೇ ಸೋರಿಕೆಯಿಲ್ಲದೆ, ಗರಿಷ್ಠ ದಕ್ಷತೆಯೊಂದಿಗೆ ಅರ್ಹ ಫಲಾನುಭವಿಗಳನ್ನು ತಲುಪಬೇಕು ಎಂಬುದನ್ನು ಕೇಂದ್ರ ಸರ್ಕಾರ ಪದೇ ಪದೇ ಪ್ರತಿಪಾದಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಪಿಎಂ ಜನ್ ಧನ್ ಯೋಜನೆ, ಪಿಎಂ ಉಜ್ವಲಾ ಯೋಜನೆ, ಪಿಎಂ ಆವಾಸ್ ಯೋಜನೆ, ಆಯುಷ್ಮಾನ್ ಭಾರತ್, ಪಿಎಂ-ಕಿಸಾನ್, ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್‌ಗಳಂತಹ ಪ್ರಮುಖ ಕಲ್ಯಾಣ ಯೋಜನೆಗಳು ಸರ್ಕಾರದ ಆಡಳಿತ ನೀತಿಯ ಕೇಂದ್ರಬಿಂದುವಾಗಿ ಮುಂದುವರಿದಿವೆ.
ಸಭೆ ಬಳಿಕ ಸುಧಾರಣೆಗೆ ಕ್ರಮ:
ಈ ಸಭೆಯಲ್ಲಿ ಪ್ರಮುಖ ಯೋಜನೆಗಳ ಪ್ರಸ್ತುತ ಸ್ಥಿತಿ, ತಳಮಟ್ಟದಲ್ಲಿ ಅವುಗಳು ತಂದಿರುವ ಬದಲಾವಣೆ, ತಲುಪಿರುವ ಗುರಿಗಳು ಹಾಗೂ ಇನ್ನೂ ಸರಿಪಡಿಸಬೇಕಾದ ಕುಂದುಕೊರತೆಗಳ ಕುರಿತು ಸಮಗ್ರವಾಗಿ ಪರಿಶೀಲಿಸಲಾಗುವುದು. ಸರ್ಕಾರದ ಸಮಗ್ರ ಅಭಿವೃದ್ಧಿ ಹಾಗೂ ಬಡ ಮತ್ತು ಶೋಷಿತ ವರ್ಗಗಳ ಸಬಲೀಕರಣದ ಆಶಯಕ್ಕೆ ತಕ್ಕಂತೆ ಸಚಿವಾಲಯಗಳು ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಕೂಡ ಮೌಲ್ಯಮಾಪನ ಮಾಡಲಾಗುತ್ತದೆ. ಸಭೆಯ ನಂತರ ಹೊರಬೀಳುವ ಪ್ರತಿಕ್ರಿಯೆಗಳು ಹಾಗೂ ನೀಡಲಾಗುವ ನಿರ್ದೇಶನಗಳ ಆಧಾರದ ಮೇಲೆ ಅಗತ್ಯ ಕ್ರಮಗಳು ಮತ್ತು ಸುಧಾರಣೆಗಳು ಜಾರಿಯಾಗುವ ನಿರೀಕ್ಷೆಯಿದೆ.


