ಕೌನ್ ಬನೇಗಾ ಕರೋಡ್​ಪತಿ ಕಾರ್ಯಕ್ರಮದಲ್ಲಿ, ಮುಂಬೈನ ಕೊಳೆಗೇರಿ ನಿವಾಸಿ ರುಚಿತಾ ಅಧಲ್‌ರಾವ್, ತನ್ನ ಅಪ್ಪ-ಅಮ್ಮನಿಗಾಗಿ ಉತ್ತಮ ಜೀವನ ಕಲ್ಪಿಸುವ ಕನಸನ್ನು ಹಂಚಿಕೊಂಡು ಅಮಿತಾಭ್ ಬಚ್ಚನ್ ಅವರನ್ನು ಭಾವುಕರನ್ನಾಗಿಸಿದರು. ತನ್ನ ತಂದೆಗಾಗಿ ಬಸ್​ ಪ್ರಯಾಣದ ಹಣ ಉಳಿಸಿ ನಡೆದು ಕಾಲೇಜಿಗೆ ಹೋಗುತ್ತಿದ್ದ ಈ ಯುವತಿ, 50 ಲಕ್ಷ ರೂಪಾಯಿ ಗೆದ್ದು ತನ್ನ ಕನಸನ್ನು ನನಸು ಮಾಡಿಕೊಳ್ಳುವತ್ತ ಹೆಜ್ಜೆ ಇಟ್ಟಿದ್ದಾಳೆ.

'ನಿನ್ನ ಕನಸೇನಮ್ಮಾ' ಎಂದು ಆ ಯುವತಿಗೆ ನಟ ಅಮಿತಾಭ್​ ಬಚ್ಚನ್​ ಕೇಳಿದಾಗ, ಅಪ್ಪ-ಅಮ್ಮನ ಬಳಿ ಒಳ್ಳೆಯ ಬಟ್ಟೆ ಇಲ್ಲ. ನಮ್ಮ ಮನೆಯಲ್ಲಿ ಮಲಗಲು ಮೆತ್ತನೆಯ ಹಾಸಿಗೆ ಇಲ್ಲ. ನಾವು ಇರುವುದು ಕೊಳೆಗೇರಿಯ 10/10 ಅಡಿ ಮನೆಯಲ್ಲಿ. ಅಪ್ಪ-ಅಮ್ಮನಿಗೆ ಒಂದೊಳ್ಳೆ ಸೂರು ಕೊಡಿಸುವ ಆಸೆ, ಬಟ್ಟೆ ಕೊಡಿಸುವ ಆಸೆ, ಅವರಿಗೆ ಮಲಗಲು ಒಳ್ಳೆಯ ಹಾಸಿಗೆ ನೀಡುವ ಆಸೆ ಎಂದಳು ಆ ಯುವತಿ. ಎಲ್ಲವೂ ಅಪ್ಪ-ಅಮ್ಮನಿಗೇ ಕೇಳ್ತಿದ್ದಿಯಲ್ಲಮ್ಮ, ನಿನಗೂ ಏನಾದ್ರೂ ಕೇಳಿಕೋ ಎಂದಾಗ, ಆ ಯುವತಿ, ಬೇಡ ನನಗೆ ಏನೂ ಬೇಡ. ನನಗೆ ನನ್ನ ಅಪ್ಪ-ಅಮ್ಮನೇ ಎಲ್ಲಾ. ಅವರು ನೆಮ್ಮದಿಯಿಂದ ಇದ್ದು, ಅವರ ಆಶೀರ್ವಾದ ಸಿಕ್ಕರೆ ಸಾಕು ಎಂದಾಗ ನಟನ ಕಣ್ಣುಗಳು ತೇವಗೊಂಡವು, ಅಲ್ಲಿ ಸಂಪೂರ್ಣ ನಿಶ್ಶಬ್ದ ವಾತಾವರಣ. ಅಲ್ಲಿ ಬಂದಿದ್ದವರೂ ಕಣ್ಣೀರು ಒರೆಸಿಕೊಂಡರು.

ಅಪ್ಪ ಹೇಳಿದ ಮಾತಿಗೆ ಭಾವುಕ

ಇಷ್ಟಾಗುತ್ತಿದ್ದಂತೆಯೇ, ಅಲ್ಲಿಯೇ ಕುಳಿತ ಆಕೆಯ ಅಪ್ಪ, ನನ್ನ ಮಗಳ ಕಾಲೇಜು ತುಂಬಾ ದೂರ ಇತ್ತು. ಅವಳಿಗೆ ಬಸ್​ಗೆ ಹೋಗುವುದಕ್ಕಾಗಿ ಬಸ್​ ಟಿಕೆಟ್​ಗೆ ಆಗುವಷ್ಟು ಹಣ ಕೊಡುತ್ತಿದ್ದೆ. ಒಂದು ದಿನ ನನ್ನ ಬಳಿ ದುಡ್ಡೆಲ್ಲಾ ಖಾಲಿಯಾಯಿತು. ಏನು ಮಾಡುವುದು ಎಂದು ತಿಳಿಯದಾದಾಗ, ನನ್ನ ಮಗಳು ಬಂದು ನನ್ನ ಕೈಯಲ್ಲಿ 500 ರೂಪಾಯಿ ಇತ್ತಳು. ನಿನ್ನ ಬಳಿ ಇಷ್ಟೊಂದು ಹಣ ಹೇಗೆ ಬಂತಮ್ಮಾ ಎಂದು ಕೇಳಿದೆ. ಆಗಲೇ ನಮಗೆ ಗೊತ್ತಾಗಿದ್ದು, ಅವಳು ಬಸ್​ಗೆ ಹೋಗುವ ದುಡ್ಡನ್ನು ಉಳಿಸಿ, ನಿತ್ಯವೂ ನಡೆದುಕೊಂಡು ಹೋಗುತ್ತಿದ್ದಳು ಎಂದಾಗ ಅಲ್ಲಿದ್ದವರಿಂದ ಚಪ್ಪಾಳೆಗಳ ಸುರಿಮಳೆ. ಇಡೀ ವಾತಾವರಣವೇ ಭಾವುಕ.

ಇಂಥದ್ದೊಂದು ದೃಶ್ಯ ಕಂಡು ಬಂದಿದ್ದು, ಅಮಿತಾಭ್​ ಬಚ್ಚನ್​ ನಡೆಸಿಕೊಂಡು ಕೌನ್​ ಬನೇಗಾ ಕರೋಡ್​ಪತಿ (KBC) 18ನೇ ಸೀಸನ್​ನಲ್ಲಿ. ಮುಂಬೈನ ಧಾರಾವಿ ಕೊಳೆಗೇರಿಯ ನಿವಾಸಿ, ಈ ಪ್ರತಿಭೆ ಅಲ್ಲಿಂದ ಅಮಿತಾಭ್​ ಎದುರು ಕೆಬಿಸಿಯ ಹಾಟ್​ ಸೀಟ್​ನಲ್ಲಿ ಕುಳಿತಾಗ, ಅವಳು ಹೇಳುತ್ತಿದ್ದ ಒಂದೊಂದು ಮಾತುಗಳೂ ಅಮಿತಾಭ್​ ಅವರನ್ನು ಮಾತ್ರವಲ್ಲದೇ, ಅಲ್ಲಿ ನೆರೆದಿದ್ದವರನ್ನೂ ಭಾವುಕ ಮಾಡಿಸಿತು. ಕುಟುಂಬದ ಉದ್ಧಾರ ಮಾಡಲು ಕುಲಪುತ್ರನೇ ಬೇಕು ಎಂದು ಹಂಬಲಿಸುವ ಎಷ್ಟೋ ಅಪ್ಪ-ಅಮ್ಮಂದಿರಿಗೆ ಈ ಯುವತಿಯ ಮಾತುಗಳು ಕಣ್ಣು ತೆರೆಸಿರುವುದಂತೂ ದಿಟ.

ಯಾರೀ ಪ್ರತಿಭೆ?

ಅಂದಹಾಗೆ ಈ ಪ್ರತಿಭೆಯ ಹೆಸರು, ರುಚಿತಾ ಅಧಲ್‌ರಾವ್. ಒಂದು ಕೋಟಿಯ ಪ್ರಶ್ನೆಯವರೆಗೂ ತಲುಪಿದ ರುಚಿತಾ, ಕೊನೆಗೆ ಆ ಪ್ರಶ್ನೆಗೆ ಉತ್ತರ ತಿಳಿಯದೇ 50 ಲಕ್ಷವನ್ನು ಗೆದ್ದಳು. ಅಪ್ಪ ದುಡಿಯುತ್ತಿರುವುದು 600 ರೂಪಾಯಿ ಮಾತ್ರ. ಧಾರಾವಿ ಸ್ಲಂ ಎಂದರೇನೇ ಅದರ ಭೀಕರತೆ ತಿಳಿಯುತ್ತದೆ. ಅಂಥ ಕೊಳೆಗೇರಿಯಲ್ಲಿ ಹುಟ್ಟಿದ ರುಚಿತಾ, ಸಾಧಿಸುವ ಛಲ ಇದ್ದರೆ, ಎಲ್ಲಿ ಹುಟ್ಟಿದರೇನು, ಎಷ್ಟು ಕಷ್ಟವಾದರೇನು, ಸಾಧನೆಯ ಮುಂದೆ ಯಾವುದೂ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾಳೆ. ಕಾಲೇಜಿಗೂ ಫೀಸ್​ ಕಟ್ಟಲು ಆಗದ ಕಷ್ಟ. ಇದರ ಹೊರತಾಗಿಯೂ ರುಚಿತಾ ತನ್ನ ಅಧ್ಯಯನಕ್ಕೆ ಯುಟ್ಯೂಬ್​ನಲ್ಲಿ ಸಿಗುವ ಉಚಿತ ಕೋರ್ಟ್​, ಸಾರ್ವಜನಿಕ ವೈ-ಫೈ ಪಡೆದುಕೊಂಡೇ ಓದುತ್ತಿದ್ದಾಳೆ. 50 ಲಕ್ಷ ಗೆದ್ದಿರೋ, ಈಕೆ ತನ್ನ ಕನಸನ್ನು ನನಸು ಮಾಡಿಕೊಳ್ಳುವ ದಾರಿಯಲ್ಲಿ ಇದ್ದಾಳೆ.