ಹಜ್ ಯಾತ್ರೆಗೆ ಆಯ್ಕೆಯಾದ ಯಾತ್ರಿಕರಿಗೆ ಎರಡು ಹಂತದ ವೈದ್ಯಕೀಯ ತಪಾಸಣೆ ಮತ್ತು ಫಿಟ್ನೆಸ್ ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲಾಗಿದೆ. ಮೊದಲ ಹಂತದ ಪ್ರಮಾಣಪತ್ರವನ್ನು ಸೆಪ್ಟೆಂಬರ್ 15ರೊಳಗೆ ಸಲ್ಲಿಸಬೇಕಿದ್ದು, ಸುತ್ತೋಲೆಯು ಅಗತ್ಯ ಪರೀಕ್ಷೆಗಳು, ಆಸ್ಪತ್ರೆಗಳ ವಿವರ ಮತ್ತು ನಿಯಮ ಉಲ್ಲಂಘನೆಯ ಪರಿಣಾಮಗಳನ್ನು ವಿವರಿಸುತ್ತದೆ.

ಬೆಂಗಳೂರು (ಸೆ.10): ಹಜ್ ಯಾತ್ರೆಗೆ ತಾತ್ಕಾಲಿಕವಾಗಿ ಆಯ್ಕೆಯಾಗಿರುವ ಯಾತ್ರಿಕರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯವು ಮಹತ್ವದ ಸೂಚನೆಯೊಂದನ್ನು ನೀಡಿದೆ. ಹಜ್ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬ ಯಾತ್ರಿಕರಿಗೂ ಎರಡು ಹಂತಗಳ ವೈದ್ಯಕೀಯ ತಪಾಸಣೆ ಮತ್ತು ಫಿಟ್ನೆಸ್ ಪ್ರಮಾಣೀಕರಣವನ್ನು ಕಡ್ಡಾಯಗೊಳಿಸಲಾಗಿದ್ದು, ಮೊದಲ ಹಂತದ ಪ್ರಾಥಮಿಕ ಫಿಟ್ನೆಸ್ ಪ್ರಮಾಣಪತ್ರವನ್ನು ಸಲ್ಲಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದೆ.

ಈ ಕುರಿತು ರಾಜ್ಯ ಹಜ್ ಯಾತ್ರಿಕರ ಆರೋಗ್ಯ ಮತ್ತು ಲಸಿಕಾ ಶಿಬಿರದ ರಾಜ್ಯ ನೋಡಲ್ ಅಧಿಕಾರಿ ಡಾ. ಮಹಮೂದ್ ಷರೀಫ್ ಅವರು ಸುತ್ತೋಲೆ ಹೊರಡಿಸಿದ್ದು, ಯಾತ್ರಿಕರು ನಿಗದಿತ ದಿನಾಂಕದೊಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಮನವಿ ಮಾಡಿದ್ದಾರೆ.

ಎರಡು ಹಂತದ ವೈದ್ಯಕೀಯ ತಪಾಸಣೆ ಕಡ್ಡಾಯ

ಹಜ್ ಯಾತ್ರೆಗೆ ದೈಹಿಕವಾಗಿ ಸಂಪೂರ್ಣ ಸದೃಢರಾಗಿರುವ ಯಾತ್ರಿಕರು ಮಾತ್ರ ತೆರಳುವುದನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಹಜ್ ಸಮಿತಿಯ (HCoI) ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಹಂತ 1 (Stage - 1): ಪ್ರಾಥಮಿಕ ವೈದ್ಯಕೀಯ ತಪಾಸಣೆ ಮತ್ತು ಫಿಟ್ನೆಸ್ ಪ್ರಮಾಣಪತ್ರ ಪಡೆಯುವುದು.

ಹಂತ 2 (Stage - 2): ಪ್ರಯಾಣಕ್ಕೆ ಕೆಲವೇ ದಿನಗಳಿರುವಾಗ ನಡೆಯುವ ಅಂತಿಮ ವೈದ್ಯಕೀಯ ತಪಾಸಣೆ ಹಾಗೂ ಕಡ್ಡಾಯ ಲಸಿಕೆ (Vaccination) ಪಡೆಯುವುದು.

ವೈದ್ಯಕೀಯ ತಪಾಸಣೆ ಎಲ್ಲಿ ಮಾಡಿಸಬೇಕು?

ಯಾತ್ರಿಕರು ತಮ್ಮ ಸಮೀಪದ ಸರ್ಕಾರಿ ಅಲೋಪತಿ ವೈದ್ಯಾಧಿಕಾರಿಗಳಿಂದ ಮಾತ್ರ ತಪಾಸಣೆಗೆ ಒಳಗಾಗಬೇಕು. ಎಲ್ಲಾ ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಇನ್ನು ಬೆಂಗಳೂರಿನ ಜನರು ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಮಲ್ಲೇಶ್ವರಂನ ಕೆ.ಸಿ. ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ (Jayanagar GH) ಹಾಗೂ ಇಂದಿರಾನಗರದ ಶ್ರೀ ಸಿ.ವಿ. ರಾಮನ್ ಜನರಲ್ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು.

ಕಡ್ಡಾಯವಾಗಿ ಮಾಡಿಸಬೇಕಾದ ಲ್ಯಾಬ್ ಪರೀಕ್ಷೆಗಳು:

ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಕೆಳಗಿನ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಿ, ವರದಿಗಳು ನಿಗದಿತ ಮಿತಿಯೊಳಗೆ (Acceptable range) ಇರಬೇಕು:

  • ಸಿಬಿಸಿ (CBC - Complete Blood Count)
  • ರಕ್ತದಲ್ಲಿನ ಸಕ್ಕರೆ ಅಂಶ (FBS / HbA1c)
  • ಎದೆಯ ಎಕ್ಸ್-ರೇ (X-ray Chest PA view - ಮೂಲ ಫಿಲ್ಮ್ ತರಬೇಕು)
  • ಮೂತ್ರಪಿಂಡ ಪರೀಕ್ಷೆ (KFT)
  • ಲಿವರ್ ಪರೀಕ್ಷೆ (LFT)
  • ಇಸಿಜಿ (ECG) - 40 ವರ್ಷ ಮೇಲ್ಪಟ್ಟವರಿಗೆ ಹಾಗೂ ರಕ್ತದೊತ್ತಡ/ಮಧುಮೇಹ/ಸ್ಥೂಲಕಾಯ ಇರುವವರಿಗೆ ಕಡ್ಡಾಯ.

ದಾಖಲೆ ಅಪ್‌ಲೋಡ್ ಮತ್ತು ಸಲ್ಲಿಕೆ ಹೇಗೆ?

ವೈದ್ಯಕೀಯ ತಪಾಸಣೆ ಮುಗಿದ ಬಳಿಕ ನಿಗದಿತ ನಮೂನೆಯಲ್ಲಿ ವೈದ್ಯರ ಸಹಿ ಮತ್ತು ಮೊಹರು ಹೊಂದಿರುವ ಪ್ರಾಥಮಿಕ ಫಿಟ್ನೆಸ್ ಪ್ರಮಾಣಪತ್ರ (Primary Medical Fitness Certificate) ಹಾಗೂ ಬ್ಯಾಂಕ್ ಪೇ-ಇನ್ ಸ್ಲಿಪ್/ಆನ್‌ಲೈನ್ ಪಾವತಿ ರಸೀದಿಯನ್ನು ಅಧಿಕೃತ HCoI ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬೇಕು. ನಂತರ ಇವುಗಳ ಭೌತಿಕ ಪ್ರತಿಗಳನ್ನು (Physical Copies) ಸೆಪ್ಟೆಂಬರ್ 15ರೊಳಗೆ ಬೆಂಗಳೂರಿನಲ್ಲಿರುವ 'ರಾಜ್ಯ ಹಜ್ ಸಮಿತಿ ಕಚೇರಿಗೆ' ಕಡ್ಡಾಯವಾಗಿ ತಲುಪಿಸಬೇಕು. ಮೂಲ ಪ್ರಮಾಣಪತ್ರ ಮತ್ತು ಎಲ್ಲಾ ಲ್ಯಾಬ್ ವರದಿಗಳನ್ನು ಯಾತ್ರಿಕರು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಪ್ರಯಾಣದ ದಿನಾಂಕ ಹತ್ತಿರವಿರುವಾಗ ನಡೆಯುವ 2ನೇ ಹಂತದ (Stage-2) ಲಸಿಕಾ ಶಿಬಿರದ ವೇಳೆ ಇವುಗಳನ್ನು ಹಾಜರುಪಡಿಸಬೇಕಾಗುತ್ತದೆ.

ಸುಳ್ಳು ಮಾಹಿತಿ ನೀಡಿದರೆ ಕಠಿಣ ಕ್ರಮದ ಎಚ್ಚರಿಕೆ

ಹಜ್ ನೀತಿಯ ಅನ್ವಯ, ಅರ್ಜಿದಾರರು ತಮ್ಮ ಆರೋಗ್ಯದ ಬಗ್ಗೆ ಯಾವುದೇ ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದರೆ ಅಂತಹವರನ್ನು ಯಾವುದೇ ಹಂತದಲ್ಲಾದರೂ (ವಿಮಾನ ಹತ್ತುವ ಸ್ಥಳದಲ್ಲೂ ಸಹ) ಅನರ್ಹಗೊಳಿಸಲಾಗುತ್ತದೆ. ಜೊತೆಗೆ ಅವರು ಪಾವತಿಸಿದ ಸಂಪೂರ್ಣ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ. 28 ವಾರಕ್ಕಿಂತ ಹೆಚ್ಚಿನ ಗರ್ಭಿಣಿಯರಿಗೆ ಹಾಗೂ ಗಂಭೀರ ಕಾಯಿಲೆ (ಮುಂದುವರಿದ ಹೃದಯ, ಶ್ವಾಸಕೋಶ, ಕಿಡ್ನಿ ಕಾಯಿಲೆ, ಕ್ಯಾನ್ಸರ್, ಮುಂತಾದವು) ಇರುವವರಿಗೆ ಸೌದಿ ಅರೇಬಿಯಾ ನಿಯಮಾವಳಿಗಳ ಪ್ರಕಾರ ಪ್ರಯಾಣಕ್ಕೆ ಅನುಮತಿ ಇರುವುದಿಲ್ಲ.