ಹಿಂದೂ ತೃತೀಯ ಲಿಂಗಿಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ, HIV ಸೋಂಕು ತಗುಲಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಆರೋಪದ ಹಿನ್ನೆಲೆಯಲ್ಲಿ ತೃತೀಯ ಲಿಂಗಿಗಳ ನಡುವೆ ಘರ್ಷಣೆ ಉಂಟಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇಂದೋರ್: ಹಿಂದೂ ತೃತೀಯ ಲಿಂಗಿಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗುತ್ತಿದ ಎಂಬ ಗಂಭೀರ ಆರೋಪವೊಂದು ಇಂದೋರ್ ನಗರದ ನಂದಲಾಲ್‌ಪುರ ಪ್ರದೇಶದಲ್ಲಿ ಕೇಳಿ ಬಂದಿದೆ. ಇಂದೋರ್‌ನಲ್ಲಿರುವ ಕೆಲವು ಮುಸ್ಲಿಂ ತೃತೀಯ ಲಿಂಗಿಗಳು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಾಯಿಸುತ್ತಿದ್ದು, ಚುಚ್ಚುಮದ್ದುಗಳ ಮೂಲಕ ಹೆಚ್‌ಐವಿ ಸೋಂಕು ತಗುಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದೀಗ ಇಂದೋರ್‌ನಲ್ಲಿ ಮಂಗಳಮುಖಿಯರು ಎರಡು ಗುಂಪುಗಳಾಗಿ ವಿಂಗಡನೆಯಾಗಿದ್ದು, ಇರ್ವರ ನಡುವೆ ಸಂಘರ್ಷ ಉಂಟಾಗಿದೆ.

ಇಂದೋರ್‌ನ ಹಿಂದೂ ತೃತೀಯ ಲಿಂಗಿಗಳ ನಾಯಕಿ ಸಕೀನಾ ಗುರು ಹಲವು ಆರೋಪಗಳನ್ನು ಮಾಡಿದ್ದಾರೆ. ಮಾಲೇಗಾಂವ್‌ನಿಂದ ಬಂದಿರುವ ಪಾಯಲ್ ಅಲಿಯಾಸ್ ನಯೀಮ್ ಅನ್ಸಾರಿ ಮತ್ತು ಸೀಮಾ ಹಾಜಿ ಅಲಿಯಾಸ್ ಫರ್ಜಾನಾ ಹೆಸರಿನ ತೃತೀಯ ಲಿಂಗಿಗಳು ಇಸ್ಲಾಂಗೆ ಮತಾಂತರವಾಗುವಂತೆ ಒತ್ತಡ ಹಾಕುತ್ತಿದ್ದಾರೆ. ಕೆಲ ಇಂಜೆಕ್ಷನ್ ನೀಡಿದ್ದರಿಂದ ಸುಮಾರು 60ಕ್ಕೂ ಅಧಿಕ ಹಿಂದೂ ತೃತೀಯ ಲಿಂಗಿಗಳು ಅಸ್ವಸ್ಥರಾಗಿದ್ದಾರೆ. ಈ ಇಂಜೆಕ್ಷನ್‌ನಿಂದಾಗಿಯೇ ಸುಮಾರು 12 ಎಚ್‌ಐವಿ ಸೋಂಕಿತ ತೃತೀತ ಲಿಂಗಿಗಳು ನಗರದ ಎಂವೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತದ್ದಾರೆ ಎಂದು ಹೇಳಿದ್ದಾರೆ.

ನಗರದಲ್ಲಿ 100ಕ್ಕೂ ಅಧಿಕ HIV ಸೋಂಕಿತರು

ಪಾಯಲ್ ಮತ್ತು ಸೀಮಾ ಒತ್ತಡಕ್ಕೆ ಮಣಿದು ಕೆಲವರು ಇಸ್ಲಾಂಗೆ ಮತಾಂತರಗೊಂಡ್ರೆ ಒಂದಿಷ್ಟು ಮಂದಿ ನಗರದಿಂದಲೇ ಪಲಾಯಾನ ಆಗಿದ್ದಾರೆ. ಕೆಲವರು ಮತಾಂತರಗೊಂಡು ಅವರಿಬ್ಬರ ಸಮುದಾಯವನ್ನು ಸೇರಿಕೊಂಡಿದ್ದಾರೆ. ಇವರಿಬ್ಬರು ಸುಮಾರು 60ಕ್ಕೂ ಅಧಿಕ ಹಿಂದೂ ತೃತೀಯ ಲಿಂಗಿಗಳಿಗೆ ಹೆಚ್‌ಐವಿ ಸೋಂಕಿನ ಚುಚ್ಚುಮದ್ದು ಚುಚ್ಚಿದ್ದಾರೆ. ಇದರ ಪರಿಣಾಮ ನಗರದಲ್ಲಿ 100ಕ್ಕೂ ಅಧಿಕ HIV ಸೋಂಕಿತರಿದ್ದಾರೆ. ಇದು ಸಮಾಜದ ಆರೋಗ್ಯಕ್ಕೆ ಆತಂಕವನ್ನುಂಟು ಮಾಡಿದೆ ಎಂದು ಸಕೀನಾ ಹೇಳುತ್ತಾರೆ.

ಇದು ಕಿನ್ನರ್ ಜಿಹಾದ್

ಈ ಕುರಿತು ಮಾತನಾಡಿರುವ ಹಿಂದೂ ತೃತೀಯ ಲಿಂಗಿಗಳ ಪರ ವಕೀಲ ಸಚಿನ್ ಸೋಂಕರ್, ಪ್ರಕರಣ ಸಂಬಂಧ ಭಾರತದ ಮುಖ್ಯ ನ್ಯಾಯಮೂರ್ತಿ, ಪಿಎಂಒ, ಸಿಎಂಒ, ಕಲೆಕ್ಟರ್ ಮತ್ತು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ ಮಾಡಲಾಗಿದೆ. ಈ ಎಲ್ಲಾ ಆರೋಪಗಳಿಗೆ ಸಂಬಂಧಿಸಿದಂತೆ ಫೋಟೋ ಮತ್ತು ವಿಡಿಯೋಗಳನ್ನು ಸಲ್ಲಿಕೆ ಮಾಡಲಾಗಿದೆ. ಕಿನ್ನರ್ ಜಿಹಾದ್‌ ಅಡಿಯಲ್ಲಿ HIV ಸೋಂಕಿತರಾಗಿರುವ ತೃತೀಯ ಲಿಂಗಿಗಳು ನಗರದಲ್ಲಿ ಓಡಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸೀಮಾ ಮತ್ತು ಪಾಯಲ್ ಗುಂಪಿನ ವಿರುದ್ಧ ಹಿಂದೂ ತೃತೀಯ ಲಿಂಗಿಗಳು ಚಂದನ್ ನಗರ ಮತ್ತು ವಿಜಯ್ ನಗರ ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಎಫ್‌ಐಆರ್ ಸಹ ದಾಖಲಾಗಿದೆ.

ಯಾರು ಈ ಪಾಯಲ್?

ಸಕೀನಾ ಹೇಳುವ ಪ್ರಕಾರ, ಮಾಲೇಗಾಂವ್ ಮೂಲದ ಪಾಯಲ್ 2000ರಲ್ಲಿ ತನ್ನ ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಇಂದೋರ್‌ಗೆ ಬಂದು ನೆಲೆಸಿದನು. ಇಲ್ಲಿಗೆ ಬಂದ ನಂತರ ಲಿಂಗ ಪರಿವರ್ತನೆ ಮಾಡಿಕೊಂಡು ಮಂಗಳಮುಖಿಯಾಗಿ ಬದಲಾದನು. ನಂತರ ಸೀಮಾಳಿಗೂ ಮತಾಂತರಗೊಂಡು ಹಜ್ ಯಾತ್ರೆ ಕೈಗೊಳ್ಳವಂತೆ ಒತ್ತಾಯಿಸಲಾಗಿತ್ತು. ಇದು ಮತಾಂತರ ಮಾಡುವ ಗುಂಪು ಎಂದು ಅರಿತ ಸಕೀನಾ ತಮ್ಮದೇ ಆದ ಹಿಂದೂ ತೃತೀಯ ಲಿಂಗಿಗಳ ಗುಂಪು ರಚಿಸಿಕೊಂಡರು. ಅಂದಿನಿಂದ ಇಂದೋರ್‌ನಲ್ಲಿ ಎರಡು ಸಮುದಾಯದ ಗುಂಪುಗಳು ರಚನೆಯಾಗಿವೆ. ಹಿಂದೂ ಸದಸ್ಯರ ಮೇಲೆ ಒತ್ತಡ ಹೇರಲು ಸೀಮಾ ಮಹಾರಾಷ್ಟ್ರದಿಂದ ಹೆಚ್ಚಿನ ಮುಸ್ಲಿಂ ಲಿಂಗಪರಿವರ್ತನೆಗೊಳಗಾದ ವ್ಯಕ್ತಿಗಳನ್ನು ಕರೆತಂದಿದ್ದಾಳೆ ಎಂದು ಸಕೀನಾ ಆರೋಪಿಸುತ್ತಾರೆ.

ಪ್ರಕರಣದ ತನಿಖೆಗೆ SIT ರಚನೆ

ಒಂದು ತಿಂಗಳ ಹಿಂದೆಯೇ ತೃತೀಯ ಲಿಂಗಿಗಳು ಇಬ್ಬರ ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಿಸುವ ಸಂದರ್ಭ ಪೊಲೀಸ್ ಠಾಣೆಯಲ್ಲಿಯೇ ಘರ್ಷಣೆ ಉಂಟಾಗಿತ್ತು. ಈ ಘಟನೆ ಬಳಿಕ ಸಕೀಲಾ, ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸೀಮಾ ಮತ್ತು ಪಾಯಲ್ ಹಲ್ಲೆ ನಡೆಸುವ ವಿಡಿಯೋ ಸಮೇತ ದೂರು ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳು ಈ ಪ್ರಕರಣದ ತನಿಖೆಯನ್ನು ಎಸ್‌ಡಿಎಂ ನಿಧಿ ವರ್ಮಾ ಅವರಿಗೆ ವರ್ಗಾಯಿಸಲಾಗಿತ್ತು. ಆದ್ರೂ ತನಿಖೆ ವೇಗ ಪಡೆದುಕೊಂಡಿರಲಿಲ್ಲ. ಕೊನೆಗೆ ಸಕೀನಾ ಮತ್ತು ಇತರೆ ತೃತೀಯ ಲಿಂಗಿಗಳು ಆತ್ಮಹ*ತ್ಯೆ ಮಾಡಿಕೊಳ್ಳೋದಾಗಿ ಹೇಳಿದ ಕೂಡಲೇ ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚನೆ ಮಾಡಲಾಗಿದೆ.

ಇಂದೋರ್ ಪೊಲೀಸ್ ಆಯುಕ್ತ ಸಂತೋಷ್ ಕುಮಾರ್ ಸಿಂಗ್ ರಚಿಸಿರುವ ಎಸ್‌ಐಟಿ ತಂಡದಲ್ಲಿ ಡಿಸಿಪಿ ರಿಷಿಕೇಶ್ ಮೀನಾ (ವಲಯ 4), ಹೆಚ್ಚುವರಿ ಡಿಸಿಪಿ ಡಿಶಸ್ ಅಗರ್ವಾಲ್, ಐಪಿಎಸ್ ಅಧಿಕಾರಿ ಆದಿತ್ಯ ಪಟಾಲೆ ಮತ್ತು ಎಸಿಪಿ ಹೇಮಂತ್ ಚೌಹಾಣ್ ಇದ್ದಾರೆ. ಸದ್ಯ ತೃತೀಯ ಲಿಂಗಿಗಳು ಆರೋಪಿಸಿರುವ ಕಿನ್ನರ್ ಜಿಹಾದ್ ಬಗ್ಗೆ ತನಿಖೆ ನಡೆಸಲಾಗುತ್ತಿದೆ.