ಎಸ್ಕಲೇಟರ್ ಮೇಲೆ ಕೆಳಗೆ ಹೋಗಲು ಮೆಟ್ಟಿಲುಹತ್ತುವ ನಮ್ಮ ಶ್ರಮವನ್ನು ಕಡಿಮೆ ಮಾಡಿದೆ. ಎಷ್ಟೇ ಅನುಭವ ಇದ್ರೂ ಅದ್ರ ಬಳಕೆ ವೇಲೆ ನಿರ್ಲಕ್ಷ್ಯ ಮಾಡಿದ್ರೆ ನಮ್ಮ ಸಣ್ಣ ತಪ್ಪು ದೊಡ್ಡ ಅನಾಹುತಕ್ಕೆ ಕಾರಣ ಆಗಬಹುದು.
ಮೆಟ್ರೋ ಸ್ಟೇಷನ್ಗಳಿಂದ ಹಿಡಿದು ಶಾಪಿಂಗ್ ಮಾಲ್ಗಳವರೆಗೆ ಈಗ ಎಲ್ಲೆಡೆ ಎಸ್ಕಲೇಟರ್ಗಳು ಸಾಮಾನ್ಯವಾಗಿವೆ. ಮೇಲೆ-ಕೆಳಗೆ ಹೋಗಲು ಇದು ಸುಲಭವಾದ ಮಾರ್ಗವಾಗಿದ್ದರೂ, ಬಳಸುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಎದುರಾಗಬಹುದು. ಅದರಲ್ಲೂ ಮಕ್ಕಳ ಜೊತೆ ಅಥವಾ ವಯಸ್ಸಾದವರ ಜೊತೆ ಎಸ್ಕಲೇಟರ್ ಬಳಸುವಾಗ ಹೆಚ್ಚಿನ ಜಾಗ್ರತೆ ಅಗತ್ಯ.
ಎಸ್ಕಲೇಟರ್ ಬಳಸುವಾಗ ತೆಗೆದುಕೊಳ್ಳುವ ಎಚ್ಚರಿಕೆ ಏನು?
ಎಸ್ಕಲೇಟರ್ ಹತ್ತಿದ ತಕ್ಷಣ ಹ್ಯಾಂಡ್ರೈಲ್ ಹಿಡಿದುಕೊಳ್ಳುವುದು ಒಳ್ಳೆಯದು. ಎಸ್ಕಲೇಟರ್ ಏಕಾಏಕಿ ನಿಂತರೆ ಅಥವಾ ಜರ್ಕ್ ಆದ್ರೆ ಬ್ಯಾಲೆನ್ಸ್ ತಪ್ಪಿ ಬೀಳುವ ಸಾಧ್ಯತೆ ಇರುತ್ತದೆ. ಹೀಗಾಗಿ ಮೇಲೆ ಅಥವಾ ಕೆಳಗೆ ತಲುಪುವವರೆಗೂ ಹ್ಯಾಂಡ್ರೈಲ್ ಹಿಡಿದುಕೊಳ್ಳಿ.
ಹಳದಿ ಗೆರೆಯೊಳಗೆ ಕಾಲಿಡಬೇಡಿ
ಎಸ್ಕಲೇಟರ್ ಮೆಟ್ಟಿಲುಗಳ ಬದಿಯಲ್ಲಿ ಹಳದಿ ಗೆರೆಯನ್ನು ನೀವು ಗಮನಿಸಿರಬಹುದು. ಇದು ಸುರಕ್ಷತಾ ಗಡಿ. ಆ ಗೆರೆಯ ಅಂಚಿನಲ್ಲಿ ನಿಲ್ಲುವುದನ್ನು ತಪ್ಪಿಸಿ. ಶೂ ಅಥವಾ ಬಟ್ಟೆಗಳು ಎಸ್ಕಲೇಟರ್ನ ಬದಿಯ ಭಾಗದಲ್ಲಿ ಸಿಲುಕುವ ಅಪಾಯ ಇರುವುದರಿಂದ ಕಾಲುಗಳನ್ನು ಮಧ್ಯಭಾಗದಲ್ಲೇ ಇಟ್ಟುಕೊಳ್ಳಿ.
ಎಸ್ಕಲೇಟರ್ ಮೇಲೆ ಇದನ್ನು ಮಾಡಬೇಡಿ
ಎಸ್ಕಲೇಟರ್ನಲ್ಲಿ ಓಡುವುದು, ಜಿಗಿಯುವುದು ಅಥವಾ ಕುಳಿತುಕೊಳ್ಳುವುದು ಅಪಾಯಕಾರಿ. ಅದರಲ್ಲೂ ಮಕ್ಕಳು ಹ್ಯಾಂಡ್ರೈಲ್ ಮೇಲೆ ಆಟವಾಡುವುದು ಅಥವಾ ಮುಂದೆ-ಹಿಂದೆ ಓಡಾಡುವುದನ್ನು ತಪ್ಪಿಸಬೇಕು. ಎಸ್ಕಲೇಟರ್ನಲ್ಲಿ ಶಾಂತವಾಗಿ ನಿಂತು, ಹ್ಯಾಂಡ್ರೈಲ್ ಹಿಡಿದುಕೊಂಡಿರುವುದು ಸುರಕ್ಷಿತ.
ಸೀರೆ, ದುಪ್ಪಟ್ಟಾ, ಸ್ಟೋಲ್ ಬಗ್ಗೆ ಎಚ್ಚರ
ಸಡಿಲವಾದ ಬಟ್ಟೆ, ಸೀರೆ, ದುಪ್ಪಟ್ಟಾ ಅಥವಾ ಉದ್ದನೆಯ ಬಟ್ಟೆಗಳು ಎಸ್ಕಲೇಟರ್ನ ಬದಿಗೆ ಸಿಲುಕದಂತೆ ನೋಡಿಕೊಳ್ಳಿ. ಶೂ ಲೇಸ್ಗಳು ಸಡಿಲವಾಗಿದ್ದರೆ ಅವುಗಳನ್ನೂ ಸರಿಯಾಗಿ ಕಟ್ಟಿಕೊಳ್ಳಿ. ಮಕ್ಕಳ ಜೊತೆ ಹೋಗುತ್ತಿದ್ದರೆ ಅವರ ಬಟ್ಟೆ ಮತ್ತು ಶೂಗಳನ್ನೂ ಒಮ್ಮೆ ಪರಿಶೀಲಿಸಿ.
ಮಕ್ಕಳು, ವಯಸ್ಸಾದವರ ಕೈ ಹಿಡಿದುಕೊಳ್ಳಿ
ಮಕ್ಕಳು ಮತ್ತು ವಯಸ್ಸಾದವರು ಎಸ್ಕಲೇಟರ್ ಬಳಸುವಾಗ ಅವರ ಕೈ ಹಿಡಿದುಕೊಂಡಿರುವುದು ಉತ್ತಮ. ಬ್ಯಾಲೆನ್ಸ್ ತಪ್ಪಿದರೆ ತಕ್ಷಣ ಅವರನ್ನು ಹಿಡಿದುಕೊಳ್ಳಲು ಇದು ಸಹಾಯ ಮಾಡುತ್ತದೆ.
ಕಾಲು ಅಥವಾ ಬಟ್ಟೆ ಸಿಲುಕಿದರೆ ಏನು ಮಾಡಬೇಕು?
ಎಸ್ಕಲೇಟರ್ನಲ್ಲಿ ಕಾಲು ಅಥವಾ ಬಟ್ಟೆ ಸಿಲುಕಿದರೆ ಗಾಬರಿಯಾಗಿ ಓಡಲು ಅಥವಾ ವಿರುದ್ಧ ದಿಕ್ಕಿನಲ್ಲಿ ಚಲಿಸಲು ಪ್ರಯತ್ನಿಸಬೇಡಿ. ಸಾಧ್ಯವಾದರೆ ತಕ್ಷಣ ಎಸ್ಕಲೇಟರ್ನ ಮೇಲ್ಭಾಗ ಅಥವಾ ಕೆಳಭಾಗದಲ್ಲಿರುವ ಎಮರ್ಜೆನ್ಸಿ ಸ್ಟಾಪ್ ಬಟನ್ ಒತ್ತಿ. ಜೊತೆಗೆ ಮ್ಯಾನೇಜ್ಮೆಂಟ್ ಅಥವಾ ಸೆಕ್ಯುರಿಟಿ ಸಿಬ್ಬಂದಿಗೆ ತಕ್ಷಣ ಮಾಹಿತಿ ನೀಡಿ.
ಲಿಫ್ಟ್ ಬಳಕೆ
ತುಂಬಾ ಭಾರವಾದ ಸಾಮಾನುಗಳನ್ನು ಹಿಡಿದುಕೊಂಡು ಎಸ್ಕಲೇಟರ್ ಬಳಸುವುದು ಕಷ್ಟವಾಗಬಹುದು. ಅಂತಹ ಸಂದರ್ಭಗಳಲ್ಲಿ ಲಿಫ್ಟ್ ಬಳಸುವುದು ಹೆಚ್ಚು ಅನುಕೂಲಕರ.
ಮೊಬೈಲ್ ಬಳಸಬೇಡಿ
ಎಸ್ಕಲೇಟರ್ ಹತ್ತುವಾಗ ಅಥವಾ ಇಳಿಯುವಾಗ ಮೊಬೈಲ್ನಲ್ಲಿ ಬ್ಯುಸಿಯಾಗಿರುವುದು ಅಪಾಯಕ್ಕೆ ಕಾರಣವಾಗಬಹುದು. ವಿಶೇಷವಾಗಿ ಇಳಿಯುವಾಗ ಮೆಟ್ಟಿಲು ಮುಗಿಯುವ ಜಾಗವನ್ನು ಗಮನಿಸದೇ ಹೋದರೆ ಬ್ಯಾಲೆನ್ಸ್ ತಪ್ಪುವ ಸಾಧ್ಯತೆ ಇದೆ.


