ಉದಯಪುರದ 'ದಿ ಒಬೆರಾಯ್ ಉದಯವಿಲಾಸ್' ಪಂಚತಾರಾ ಹೋಟೆಲ್‌ನಲ್ಲಿ 10 ದಿನ ತಂಗಿದ್ದ ಕುಟುಂಬವೊಂದು, ₹5.74 ಲಕ್ಷ ಬಿಲ್ ಪಾವತಿಸದೆ ವಂಚಿಸಿದೆ. ಟ್ರಾವೆಲ್ ಏಜೆನ್ಸಿ ಬಿಲ್ ಪಾವತಿಸುತ್ತದೆ ಎಂದು ಹೇಳಿ ಪರಾರಿಯಾದ ದೆಹಲಿ ಮೂಲದ ಅನುರಾಗ್ ಯಾದವ್ ವಿರುದ್ಧ ಹೋಟೆಲ್ ಆಡಳಿತ ಮಂಡಳಿ ಪೊಲೀಸ್ ದೂರು ದಾಖಲಿಸಿದೆ.
ಉದಯಪುರ: ರಾಜಸ್ಥಾನದ ಐಷಾರಾಮಿ ಪ್ರವಾಸಿ ನಗರಿ ಉದಯಪುರದ ಖ್ಯಾತ ಪಂಚತಾರಾ ಹೋಟೆಲ್‌ನಲ್ಲಿ 10 ದಿನಗಳ ಕಾಲ ತಂಗಿ, ಬರೋಬ್ಬರಿ ₹5.74 ಲಕ್ಷ ಬಿಲ್ ಪಾವತಿಸದೆ ಕುಟುಂಬ ಸಮೇತ ಕಾಲ್ನಡಿಗೆ ಬೆಳೆಸಿರುವ ವಿಚಿತ್ರ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ದೆಹಲಿ ಮೂಲದ ಖಾಸಗಿ ಕಂಪನಿಯೊಂದರ ಉದ್ಯೋಗಿ ಅನುರಾಗ್ ಯಾದವ್ ಎಂಬುವವರೇ ಈ ಕೃತ್ಯ ಎಸಗಿದ ಆರೋಪ ಎದುರಿಸುತ್ತಿದ್ದು, ಹೋಟೆಲ್ ಆಡಳಿತ ಮಂಡಳಿಯ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟ್ರಾವೆಲ್ ಏಜೆನ್ಸಿಯೊಂದರ ಮೂಲಕ ಕಾಯ್ದಿರಿಸಲಾಗಿದ್ದ ಬುಕಿಂಗ್ ಆಧರಿಸಿ, ಅನುರಾಗ್ ಯಾದವ್ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಆಗಸ್ಟ್ 14 ರಿಂದ 23 ರವರೆಗೆ ಉದಯಪುರದ ‘ದಿ ಒಬೆರಾಯ್ ಉದಯವಿಲಾಸ್’ ಹೋಟೆಲ್‌ನಲ್ಲಿ ತಂಗಿದ್ದರು. ಈ ಅವಧಿಯಲ್ಲಿ ಊಟ-ಉಪಹಾರ ಸೇರಿದಂತೆ ಹೋಟೆಲ್‌ನ ಹಲವು ಐಷಾರಾಮಿ ಸೇವೆಗಳನ್ನು ಪಡೆದುಕೊಂಡಿದ್ದರು.
ಆಗಸ್ಟ್ 24 ರಂದು ಚೆಕ್-ಔಟ್ ಮಾಡುವ ಸಮಯದಲ್ಲಿ ಹೋಟೆಲ್ ಸಿಬ್ಬಂದಿ ₹5.74 ಲಕ್ಷ ಬಿಲ್ ನೀಡಿದಾಗ, ಯಾದವ್ ಹಣ ಪಾವತಿಸಲು ನಿರಾಕರಿಸಿದ್ದಾರೆ. ತಮ್ಮ ಬುಕಿಂಗ್ ಮಾಡಿದ್ದ ಟ್ರಾವೆಲ್ ಏಜೆನ್ಸಿಯೇ ಸಂಪೂರ್ಣ ಬಿಲ್ ಪಾವತಿಸಲಿದೆ ಎಂದು ಹೇಳಿ ಹೋಟೆಲ್‌ನಿಂದ ತೆರಳಿದ್ದಾರೆ.
ಪೋಲಿಸ್ ದೂರು ಮತ್ತು ತನಿಖೆ:
ಹೋಟೆಲ್‌ನ ಕಮ್ಯುನಿಕೇಶನ್ ಮ್ಯಾನೇಜರ್ ರವೀಂದ್ರ ಸಿಂಗ್, ಮೇಕರ್ ಬಹಾ ಟ್ರಾವೆಲ್ ಏಜೆನ್ಸಿಯನ್ನು ಸಂಪರ್ಕಿಸಿದಾಗ, ಯಾದವ್ ಅವರೊಂದಿಗೆ ಅಂತಹ ಯಾವುದೇ ಒಪ್ಪಂದವಿಲ್ಲ ಎಂದು ಏಜೆನ್ಸಿ ಸ್ಪಷ್ಟಪಡಿಸಿದೆ. ಇದರಿಂದ ವಂಚನೆಗೊಳಗಾದದ್ದು ಮನವರಿಕೆಯಾಗುತ್ತಿದ್ದಂತೆ ಹೋಟೆಲ್ ಆಡಳಿತ ಮಂಡಳಿಯು ಅಂಬಾಮಾತಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಪ್ರವಾಸಿ ಸಂಸ್ಥೆಯೊಂದಿಗೆ ಶಾಮೀಲಾಗಿ ಅಥವಾ ಯೋಜಿತವಾಗಿ ಈ ವಂಚನೆ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ದಿ ಒಬೆರಾಯ್ ಉದಯವಿಲಾಸ್: ವಾಸ್ತವ್ಯದ ವೆಚ್ಚ ಎಷ್ಟು?
ಪಿಚೋಲಾ ಸರೋವರದ ದಡದಲ್ಲಿರುವ 50 ಎಕರೆ ವಿಸ್ತೀರ್ಣದ 'ದಿ ಒಬೆರಾಯ್ ಉದಯವಿಲಾಸ್' ದೇಶದ ಅತ್ಯಂತ ಐಷಾರಾಮಿ ಮತ್ತು ದುಬಾರಿ ಹೋಟೆಲ್‌ಗಳಲ್ಲಿ ಒಂದಾಗಿದೆ. ಬ್ಲಾಕ್‌ಬಸ್ಟರ್ 'ಯೇ ಜವಾನಿ ಹೈ ದಿವಾನಿ' ಹಿಂದಿ ಸಿನಿಮಾದ ಚಿತ್ರೀಕರಣದ ಮೂಲಕ ಈ ಹೋಟೆಲ್ ಮತ್ತಷ್ಟು ಪ್ರಸಿದ್ಧಿ ಪಡೆದಿತ್ತು.
- ಸಾಮಾನ್ಯ ಕೊಠಡಿ (Premier Room): ಒಂದು ರಾತ್ರಿಗೆ ಸುಮಾರು ₹46,500
- ಪೂಲ್ ಕೊಠಡಿ (Semi-Private Pool): ಒಂದು ರಾತ್ರಿಗೆ ₹67,000 ವರೆಗೆ
- ಲಕ್ಷುರಿ ಸೂಟ್ (Luxury Suite): ವಿದೇಶಿ ಪ್ರವಾಸಿಗರು ಖಾಸಗಿ ಬಟ್ಲರ್ ಸೇವೆ ಸೇರಿ ಒಂದು ರಾತ್ರಿಗೆ ಸುಮಾರು ₹4.12 ಲಕ್ಷ (3,234 ಪೌಂಡ್) ಪಾವತಿಸಿದ ಉದಾಹರಣೆಗಳಿವೆ.


