ಬೆಂಗಳೂರಿನ 26 ತ್ರಿತಾರಾ ಮತ್ತು ಪಂಚತಾರಾ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ ನಡೆಸಿದ್ದು, ಅವಧಿ ಮೀರಿದ ಮಾಂಸ, ಕೊಳೆತ ತರಕಾರಿಗಳು ಮತ್ತು ಗಂಭೀರ ಅನೈರ್ಮಲ್ಯವನ್ನು ಪತ್ತೆಹಚ್ಚಿದೆ. ದಿ ಲಲಿತ್ ಅಶೋಕ್, ತಾಜ್‌ನಂತಹ ಪ್ರತಿಷ್ಠಿತ ಹೋಟೆಲ್‌ಗಳಿಂದಲೂ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರು (ಆ.8): ಬೆಂಗಳೂರು ವ್ಯಾಪ್ತಿಯ ತ್ರಿತಾರಾ(3 Star Hotels) ಹಾಗೂ ಪಂಚತಾರಾ ಹೋಟೆಲ್(Five star) ಸೇರಿ 26 ತಾರಾ ಹೋಟೆಲ್‌ಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ(Food Safety Department Raids) ನಡೆಸಿದ್ದು, ಅವಧಿ ಮೀರಿದ ಮಾಂಸ, ಕೊಳೆತ ತರಕಾರಿ ಪತ್ತೆಯಾಗಿದೆ.
ಆಹಾರ ಸುರಕ್ಷತೆ ನಿಯಮ ಉಲ್ಲಂಘನೆ, ಮಾಂಸಾಹಾರಿ ಹಾಗೂ ಸಸ್ಯಾಹಾರಿ ಆಹಾರ ಪ್ರತ್ಯೇಕಿಸದೆ ಒಟ್ಟಾಗಿ ಸಂಗ್ರಹಿಸಿರುವುದು, ಅವಧಿ ಮೀರಿದ ಆಹಾರ, ಅನೈರ್ಮಲ್ಯ, ಲೇಬಲ್ ಇಲ್ಲದಿರುವ ಬ್ರಾಂಡ್ ಬಳಕೆ, ತರಕಾರಿಗಳ ಮೇಲೆ ಫಂಗಸ್ ಬೆಳೆದಿರುವುದು ಸೇರಿ ಗಂಭೀರ ಲೋಪಗಳು ಪತ್ತೆಯಾಗಿವೆ. ಹೀಗಾಗಿ ಸಂಬಂಧಪಟ್ಟ ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಿದ್ದು, ನ್ಯಾಯ ನಿರ್ಣಾಯಕ ಅಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಶಿಫಾರಸು ಮಾಡಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಆಯುಕ್ತರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೋಟೆಲ್ ಆಹಾರ ಜಪ್ತಿ:
ತಪಾಸಣೆಯ ವೇಳೆ ದಿ ಲಲಿತ್ ಅಶೋಕ್ ಹೋಟೆಲ್‌ನಿಂದ 76 ಕೆ.ಜಿ. ಮಾಂಸ, 200 ಕೆ.ಜಿ. ತರಕಾರಿ ಜಪ್ತಿ ಮಾಡಲಾಗಿದೆ. ಜತೆಗೆ 32 ಲೀಟರ್ ಅವಧಿ ಮೀರಿದ ಹಾಲು ವಶಪಡಿಸಿಕೊಂಡು ನಾಶಪಡಿಸಲಾಗಿದೆ.
ಶಾಂಗ್ರಿ-ಲಾ ಹೋಟೆಲ್‌ನಲ್ಲಿ 15 ಕೆ.ಜಿ. ಮಾಂಸ, ಫೋರ್ ಸೀಸನ್ಸ್ ಹೋಟೆಲ್‌ನಲ್ಲಿ 19 ಕೆ.ಜಿ. ಮಾಂಸ, ತಾಜ್ ವಿವಾಂತ- ವೈಟ್‌ಫೀಲ್ಡ್‌ನಲ್ಲಿ 3 ಕೆ.ಜಿ. ಅವಧಿ ಮೀರಿದ ಬೇಕರಿ ಉತ್ಪನ್ನ ಜಪ್ತಿ ಮಾಡಲಾಗಿದೆ.
ಜತೆಗೆ ಯಶವಂತಪುರದ ತಾಜ್ ಹೋಟೆಲ್‌ನಲ್ಲಿ 72 ಕೆ.ಜಿ. ಮಾಂಸ ಹಾಗೂ ಸಾಲಮನ್ ಮೀನು, ಏಟ್ರಿಯಾ ಹೋಟೆಲ್‌ನಲ್ಲಿ 105 ಕೆ.ಜಿ. ಅವಧಿ ಮೀರಿದ ಆಹಾರ ಪದಾರ್ಥ ಜಪ್ತಿ ಮಾಡಲಾಗಿದೆ. ಇದರಲ್ಲಿ 50 ಕೆ.ಜಿ. ಕೋಳಿ ಮಾಂಸ, 25 ಕೆ.ಜಿ. ಮಾಂಸ, 23 ಕೆ.ಜಿ.ಮೀನು ಹಾಗೂ 7 ಕೆ.ಜಿ. ತರಕಾರಿ ಸೇರಿದೆ. ಇವುಗಳನ್ನು ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸುರಕ್ಷತೆ ಉಲ್ಲಂಘನೆ:
ಅಡುಗೆ ಮನೆ, ಆಹಾರ ಸಂಗ್ರಹಣೆ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ಎಫ್ಎಸ್‌ಎಸ್‌ಎಐ ನಿಯಮಗಳಿಗೆ ಅನುಗುಣವಾಗಿರುವ ಮಾಂಸ ಉತ್ಪನ್ನಗಳ ಲೇಬಲಿಂಗ್ ಇಲ್ಲದಿರುವುದು, ಅವಧಿ ಮೀರಿದ ಹಾಲಿನ ಉತ್ಪನ್ನಗಳು, ಬೇಕರಿ ಉತ್ಪನ್ನ, ಕೋಳಿ ಮಾಂಸ, ಮೀನು, ಮಾಂಸ ಹಾಗೂ ತರಕಾರಿ ಸಂಗ್ರಹ ಪತ್ತೆಯಾಗಿದೆ. ತರಕಾರಿ ಹಾಗೂ ಆಹಾರ ಪದಾರ್ಥಗಳಲ್ಲಿ ಶಿಲೀಂಧ್ರವೂ ಪತ್ತೆಯಾಗಿದೆ.
ಈ ಬಗ್ಗೆ ಪತ್ರಿಕ್ರಿಯಿಸಿರುವ ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರು ಮಾಹಿತಿ ನೀಡಿ, ತಾರಾ ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಸ್ವಚ್ಛತೆ ಮತ್ತು ಗುಣಮಟ್ಟ ಪರಿಶೀಲಿಸಿದ್ದೇವೆ. ಲೋಪಗಳು ಪತ್ತೆಯಾಗಿರುವ ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಿ ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಸ್ಯಾಹಾರಿ, ಮಾಂಸಾಹಾರಿ ಆಹಾರಗಳನ್ನು ಹೇಗೆ ಸಂಗ್ರಹಿಸಲಾಗಿದೆ ಎಂದು ಪರಿಶೀಲಿಸಲಾಗಿದೆ. ಗಂಭೀರ ಲೋಪ ಕಂಡುಬಂದರೆ ಪರವಾನಗಿ ರದ್ದು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಜನರಿಗೆ ಸತ್ಯ ತಿಳಿಯಬೇಕು
ಹೋಟೆಲ್‌ಗಳಲ್ಲಿ ಗುಣಮಟ್ಟ ಚೆನ್ನಾಗಿರುತ್ತದೆ ಎಂದು ಜನರು ಹೋಗುತ್ತಾರೆ. ಜನರಿಗೆ ವಾಸ್ತವ ತಿಳಿಸುವ ಕೆಲಸ ಮಾಡುತ್ತೇವೆ. ಬಳಿಕ ಜನರೇ ನಿರ್ಧಾರ ಮಾಡುತ್ತಾರೆ. ಒಟ್ಟಾರೆ ಜನರ ಆರೋಗ್ಯ ರಕ್ಷಣೆ ನಮ್ಮ ಉದ್ದೇಶ.
-ಯು.ಟಿ. ಖಾದರ್, ಆರೋಗ್ಯ ಸಚಿವ


