- Home
- News
- State
- ಮೇಕೆದಾಟು ಜಲಾಶಯಕ್ಕೆ 8 ತಿಂಗಳಲ್ಲಿ ಶಂಕುಸ್ಥಾಪನೆ; ತಮಿಳುನಾಡು ಮನವೊಲಿಸಲು ನಾನೇ ಹೋಗ್ತೀನಿ-ಚಲುವರಾಯಸ್ವಾಮಿ
ಮೇಕೆದಾಟು ಜಲಾಶಯಕ್ಕೆ 8 ತಿಂಗಳಲ್ಲಿ ಶಂಕುಸ್ಥಾಪನೆ; ತಮಿಳುನಾಡು ಮನವೊಲಿಸಲು ನಾನೇ ಹೋಗ್ತೀನಿ-ಚಲುವರಾಯಸ್ವಾಮಿ
ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ, ಮೇಕೆದಾಟು ಯೋಜನೆಗೆ ಮುಂದಿನ 6-8 ತಿಂಗಳಲ್ಲಿ ಶಂಕುಸ್ಥಾಪನೆ ಮಾಡಲಾಗುವುದು ಎಂದಿದ್ದಾರೆ. ಈ ಯೋಜನೆಯಿಂದ ವ್ಯರ್ಥವಾಗಿ ಸಮುದ್ರ ಸೇರುವ ನೀರನ್ನು ತಡೆದು ಸಂಗ್ರಹಿಸಲಾಗುವುದು ಹಾಗೂ ತಮಿಳುನಾಡಿನೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಬಹುದಿನಗಳ ಕನಸಿನ ಯೋಜನೆಯಾದ ಮೇಕೆದಾಟು ಯೋಜನೆಗೆ (Mekedatu Balancing Reservoir Project) ಮುಂದಿನ 6 ರಿಂದ 8 ತಿಂಗಳೊಳಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು ಕಾವೇರಿ ಬಿಕ್ಕಟ್ಟು, ಮೇಕೆದಾಟು, ಕೆಆರ್‌ಎಸ್-ತುಂಗಭದ್ರಾ ಹೂಳು ತೆರವು ಹಾಗೂ ಮಹದಾಯಿ ಯೋಜನೆಗಳ ಕುರಿತು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
6 ರಿಂದ 8 ತಿಂಗಳಲ್ಲಿ ಮೇಕೆದಾಟುಗೆ ಶಂಕುಸ್ಥಾಪನೆ
'ಮೇಕೆದಾಟು ಯೋಜನೆ ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಕನಸಾಗಿದೆ. ಯೋಜನೆಗೆ ಸಂಬಂಧಿಸಿದ ಕಾನೂನು ಹಾಗೂ ಅರಣ್ಯ ಇಲಾಖೆಯ ಅನುಮತಿ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತಿವೆ. ಮುಳುಗಡೆಯಾಗಲಿರುವ 12,500 ಎಕರೆ ಅರಣ್ಯ ಭೂಮಿಗೆ ಪರ್ಯಾಯವಾಗಿ ರಾಜ್ಯದ 13 ಜಿಲ್ಲೆಗಳಲ್ಲಿ 20,000 ಎಕರೆ ಜಮೀನನ್ನು ಈಗಾಗಲೇ ಗುರುತಿಸಲಾಗಿದೆ. ಈ ತಿಂಗಳಲ್ಲೇ ಜಿಲ್ಲಾಧಿಕಾರಿಗಳು (DC) ಮತ್ತು ಡಿಎಫ್‌ಒಗಳ (DFO) ಜತೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಅರಣ್ಯ ಇಲಾಖೆಯ ಕ್ಲಿಯರೆನ್ಸ್‌ಗೆ ಮತ್ತಷ್ಟು ವೇಗ ನೀಡಲಾಗುವುದು' ಎಂದು ಸಚಿವರು ವಿವರಿಸಿದರು.
ತಮಿಳುನಾಡು ಸಿಎಂ ಜೊತೆ ಮಾತುಕತೆಗೆ ಸಿದ್ಧ
ಕಾವೇರಿ ವಿವಾದದ ಬಗ್ಗೆ ಮಾತನಾಡಿದ ಅವರು, 'ಕಾವೇರಿ ನೀರಿನ ವಿಚಾರವನ್ನು ಯಾರೂ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಕುಡಿಯುವ ನೀರಿನ ಯೋಜನೆಗಳಿಗೆ ಯಾರೂ ಅಡ್ಡಿಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ತಮಿಳುನಾಡಿನಲ್ಲಿ ಈಗ ವಿಜಯ್ ಅವರು ಮುಖ್ಯಮಂತ್ರಿಯಾದ ಮೇಲೆ ಮೇಕೆದಾಟು ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ. ತಮಿಳುನಾಡಿನ ಬೆಂಬಲ ಪಡೆದೇ ಮೇಕೆದಾಟು ನಿರ್ಮಿಸುತ್ತೇವೆ. ಅಗತ್ಯಬಿದ್ದರೆ ನಾನೇ ಚೆನ್ನೈಗೆ ತೆರಳಿ ಅಲ್ಲಿನ ಸರ್ಕಾರವನ್ನು ಭೇಟಿ ಮಾಡಿ ಮನವೊಲಿಸಲು (ಕನ್ವಿನ್ಸ್ ಮಾಡಲು) ಸಿದ್ಧನಿದ್ದೇನೆ' ಎಂದರು.
177.25 ಟಿಎಂಸಿ ನೀರು ಖಚಿತ: 300 ಟಿಎಂಸಿ ಸಮುದ್ರಕ್ಕೆ ವ್ಯರ್ಥ
'ಕಾವೇರಿ ಜಲ ವಿವಾದ ನ್ಯಾಯಾಧಿಕರಣದ (CWDT) ತೀರ್ಪಿನಂತೆ ನಾವು ಪ್ರತಿವರ್ಷ ತಮಿಳುನಾಡಿಗೆ ನಿಗದಿತ 177.25 ಟಿಎಂಸಿ ನೀರನ್ನು ಹರಿಸಲೇಬೇಕು. ಆದರೆ ಭಾರಿ ಮಳೆಗಾಲದ ಸಂದರ್ಭದಲ್ಲಿ ಸುಮಾರು 300 ಟಿಎಂಸಿವರೆಗೆ ನೀರು ವ್ಯರ್ಥವಾಗಿ ಸಮುದ್ರಕ್ಕೆ ಸೇರುತ್ತಿದೆ. ಈ ಪೋಲಾಗುವ ನೀರನ್ನು ತಡೆದು 66 ಟಿಎಂಸಿ ಸಂಗ್ರಹಿಸಲು ಮೇಕೆದಾಟು ಅತ್ಯಗತ್ಯ. ಇದರಲ್ಲಿ ನಮಗೆ ಕೇವಲ 10 ರಿಂದ 20 ಟಿಎಂಸಿ ಕುಡಿಯುವ ನೀರು ಮಾತ್ರ ಬಳಕೆಯಾಗಲಿದ್ದು, ಉಳಿದ ನೀರು ತಮಿಳುನಾಡಿಗೇ ಹೆಚ್ಚಿನ ಅನುಕೂಲವಾಗಲಿದೆ. ಆದರೆ ತಪ್ಪು ಮಾಹಿತಿಯಿಂದಾಗಿ ಅಲ್ಲಿನವರು ಗೊಂದಲಕ್ಕೀಡಾಗಿದ್ದಾರೆ' ಎಂದು ಅಂಕಿ-ಅಂಶಗಳ ಸಮೇತ ತಿಳಿಸಿದರು.
ಕೆಆರ್‌ಎಸ್, ತುಂಗಭದ್ರಾದಲ್ಲಿ ಹೂಳು ತೆರವು:
ಸ್ವಾತಂತ್ರ್ಯದ ನಂತರ ಕೆಆರ್‌ಎಸ್ ಮತ್ತು ತುಂಗಭದ್ರಾ ಜಲಾಶಯಗಳಲ್ಲಿ ಹೂಳು ತೆಗೆಯದೇ ಇರುವುದರಿಂದ ನೀರಿನ ಶೇಖರಣಾ ಸಾಮರ್ಥ್ಯ ಗಣನೀಯವಾಗಿ ಕುಸಿದಿದೆ. ಹೂಳು ತೆರವು ಮಾಡಲು ಖಾಸಗಿ ಏಜೆನ್ಸಿಗಳು ಮುಂದೆ ಬಂದಿವೆ. ಹೂಳನ್ನು ತೆಗೆದು ಸರ್ಕಾರಕ್ಕೆ ರಾಯಲ್ಟಿ ನೀಡಿ, ಅದರಿಂದ ಮರಳು ಮತ್ತು ಇಟ್ಟಿಗೆಯಂತಹ ಉಪ-ಉತ್ಪನ್ನಗಳನ್ನು (By-products) ತಯಾರಿಸುವ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಈ ಕುರಿತು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ACS) ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ವರದಿ ಬಂದ ತಕ್ಷಣ ಹೂಳು ತೆರವು ಕಾರ್ಯ ಆರಂಭಿಸಲಾಗುವುದು ಎಂದರು.
ಮಹದಾಯಿ / ಕಳಸಾ-ಬಂಡೂರಿ ಸಮಸ್ಯೆ ಶೀಘ್ರ ಇತ್ಯರ್ಥ
'ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆಗೆ 3.2 ಟಿಎಂಸಿ ಹಂಚಿಕೆಯಾಗಿದ್ದು, ಇದು ಕೃಷಿ ಉದ್ದೇಶಕ್ಕಲ್ಲ. ಇದು ಕೇವಲ ಅರಣ್ಯ ಅನುಮತಿಯ (Forest clearance) ಸಮಸ್ಯೆಯಷ್ಟೇ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ರಾಜಕೀಯ ಜೀವನ ಆರಂಭವಾಗಿದ್ದೇ ಹುಬ್ಬಳ್ಳಿ-ಧಾರವಾಡ ಕುಡಿಯುವ ನೀರಿನ ಹೋರಾಟದಿಂದ. ಹೀಗಾಗಿ ಅವರೊಂದಿಗೆ ಚರ್ಚಿಸಿ ಕೇವಲ ಒಂದು ತಿಂಗಳಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬಹುದು' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ₹15,000 ಕೋಟಿ ಅನುದಾನ ಬಾಕಿ
ಹಿಂದಿನ ಬೊಮ್ಮಾಯಿ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಪ್ರಮುಖ ಯೋಜನೆಗಳ ಅನುದಾನ ಕೇಂದ್ರದಿಂದ ಇನ್ನೂ ಬಾಕಿಯಿದೆ:
- ಭದ್ರಾ ಮೇಲ್ದಂಡೆ ಯೋಜನೆ (Upper Bhadra): ₹5,000 ಕೋಟಿ
- ಬೆಂಗಳೂರು ಅಭಿವೃದ್ಧಿ: ₹5,000 ಕೋಟಿ
- ಮಹದಾಯಿ ಯೋಜನೆ: ₹5,000 ಕೋಟಿ
ಒಟ್ಟು ₹15,000 ಕೋಟಿ ಅನುದಾನ ಬಾಕಿಯಿದ್ದು, ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ವಿ. ಸೋಮಣ್ಣ, ಹೆಚ್.ಡಿ. ಕುಮಾರಸ್ವಾಮಿ ಹಾಗೂ ಶೋಭಾ ಕರಂದ್ಲಾಜೆ ಅವರು ಪ್ರಧಾನಮಂತ್ರಿಗಳೊಂದಿಗೆ ಚರ್ಚಿಸಿ ಈ ಹಣವನ್ನು ತರಬೇಕು. ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಒಕ್ಕೂಟ ವ್ಯವಸ್ಥೆಯಡಿ ನಾವೆಲ್ಲರೂ ಪಕ್ಷಾತೀತವಾಗಿ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

