ಮಂಗಳೂರು ವ್ಯಾಪ್ತಿಯ ರೈಲ್ವೆ ನಿಲ್ದಾಣಗಳನ್ನು ಮೈಸೂರು ವಲಯಕ್ಕೆ ಸೇರಿಸುವ ನಿರ್ಧಾರಕ್ಕೆ ಕೇರಳದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ಕೇರಳೀಯರ ಆಕ್ರೋಶ ತಣಿಸಲು ಮಂಗಳೂರು ಕೇಂದ್ರ ನಿಲ್ದಾಣವನ್ನು ಪಾಲಕ್ಕಾಡ್ ವಲಯದಲ್ಲೇ ಉಳಿಸಿಕೊಂಡು, ಉಳಿದ ನಿಲ್ದಾಣಗಳನ್ನು ಮೈಸೂರಿಗೆ ವರ್ಗಾಯಿಸುವ ಹೊಸ ಪ್ರಸ್ತಾವವೊಂದು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಯಲ್ಲಿದೆ.
ಪಾಲಕ್ಕಾಡ್: ಪಾಲಕ್ಕಾಡ್ ರೈಲ್ವೆ ವಲಯದ ವ್ಯಾಪ್ತಿಯಿಂದ ಮಂಗಳೂರು ಮತ್ತು ಅದರ ವ್ಯಾಪ್ತಿಯ ಇತರೆ ನಿಲ್ದಾಣಗಳನ್ನು ಮೈಸೂರಿನಲ್ಲಿರುವ ನೈಋತ್ಯ ರೈಲ್ವೆ ವಲಯಕ್ಕೆ ಸೇರ್ಪಡೆ ಮಾಡುವ ರೈಲ್ವೆ ಮಂಡಳಿಯ ನಿರ್ಧಾರ ಕೇರಳದಲ್ಲಿ ಭಾರೀ ವಿರೋಧಕ್ಕೆ ಕಾರಣವಾದ ಬೆನ್ನಲ್ಲೇ, ಕೇರಳೀಯರ ಆಕ್ರೋಶ ತಣಿಸಲು ಅಧಿಕಾರಿಗಳ ಮಟ್ಟದಲ್ಲಿ ಹೊಸದೊಂದು ವಿಷಯ ಚರ್ಚೆಗೆ ಬಂದಿದೆ. ಅದೇನೆಂದರೆ ಮಂಗಳೂರು ಕೇಂದ್ರ ನಿಲ್ದಾಣವನ್ನು ಮರಳಿ ಪಾಲಕ್ಕಾಡ್ ವಲಯಕ್ಕೆ ಸೇರಿಸುವುದು, ಅದನ್ನು ಬಿಟ್ಟು ಉಳಿದೆಲ್ಲಾ ನಿಲ್ದಾಣ ಮತ್ತು ಆಸ್ತಿಗಳನ್ನು ಮೈಸೂರಿಗೆ ಬಿಟ್ಟುಕೊಡುವುದಾಗಿದೆ.
ಕೇರಳಿಯರ ಆಕ್ರೋಶ
ಇದರ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲವಾದರೂ, ಇಂಥದ್ದೊಂದು ಹೊಂದಾಣಿಕೆ ತಂತ್ರ ಪಾಲಕ್ಕಾಡ್ ರೈಲ್ವೆ ವಲಯಕ್ಕೆ ಎದುರಾಗಬಹುದಾದ ಹೊಸ ಸಮಸ್ಯೆ ನೀಗುವುದರ ಜೊತೆಗೆ ಕೇರಳಿಯರ ಆಕ್ರೋಶವನ್ನೂ ಬಹುಮಟ್ಟಿಗೆ ತಣ್ಣಗೆ ಮಾಡಬಹುದು ಎಂಬ ಲೆಕ್ಕಾಚಾರ ಅಧಿಕಾರ ವರ್ಗದ್ದಾಗಿದೆ.
ಹೊಸ ಪ್ರಸ್ತಾವ ಏಕೆ?:
ಪಾಲಕ್ಕಾಡ್ ರೈಲ್ವೆ ವಲಯಕ್ಕೆ ಮಂಗಳೂರು ಕೇಂದ್ರ ನಿಲ್ದಾಣ ಅತ್ಯಂತ ಮಹತ್ವದ್ದು. ಕಾರಣ, ಮುಖ್ಯವಾದ ಕೋಚಿಂಗ್ ಮತ್ತು ಇತರೆ ನಿರ್ವಹಣಾ ವ್ಯವಸ್ಥೆಗಳು ಮಂಗಳೂರು ಕೇಂದ್ರ ನಿಲ್ದಾಣದ ವ್ಯಾಪ್ತಿಯಲ್ಲೇ ಇದೆ. ಮಂಗಳೂರು ಕೇಂದ್ರ ನಿಲ್ದಾಣ ಪಾಲಕ್ಕಾಡ್ ವಲಯದ ರೈಲ್ವೆಗೆ ಈಗಲೂ ಅತ್ಯಂತ ಮಹತ್ವವಾದ ನಿರ್ವಹಣಾ ನೆಲೆಯಾಗಿದೆ. ಹೀಗಾಗಿ ಈ ನಿಲ್ದಾಣ ಪಾಲಕ್ಕಾಡ್‌ನಲ್ಲೇ ಉಳಿದರೆ ಅದರ ರೈಲಿನ ನಿರ್ವಹಣೆ ಸುಗಮವಾಗಲಿದೆ. ಒಂದು ವೇಳೆ ಕೈತಪ್ಪಿದರೆ ಮತ್ತೆ ಪಾಲಕ್ಕಾಡ್ ವಲಯವು ಎಲ್ಲಾ ವ್ಯವಸ್ಥೆಗಳನ್ನು ಹೊಸದಾಗಿ ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಇಂಥದ್ದೊಂದು ಪ್ರಸ್ತಾಪದ ಬಗ್ಗೆ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಆದರೆ ಇದರಲ್ಲೂ ಹಲವು ನಿರ್ವಹಣಾ ಮತ್ತು ಆಡಳಿತಾತ್ಮಕ ವಿಷಯಗಳ ಕಗ್ಗಂಟಿದೆ. ಮುಖ್ಯವಾಗಿ ವ್ಯಾಪ್ತಿ, ರೈಲ್ವೆ ಆಸ್ತಿ, ನಿರ್ವಹಣಾ ಮೂಲಸೌಕರ್ಯ, ಸಿಬ್ಬಂದಿ ನಿಯೋಜನೆ, ಪಾಲಕ್ಕಾಡ್ ಮತ್ತು ಮೈಸೂರು ವಲಯದ ನಡುವೆ ಸಮನ್ವಯತೆ ಸೇರಿದಂತೆ ಹಲವು ಸಮಸ್ಯೆಗಳು ಇದ್ದೇ ಇವೆ. ಆದರೆ ಇಂಥದ್ದೊಂದು ಸಣ್ಣ ಬದಲಾವಣೆ ಪಾಲಕ್ಕಾಡ್ ರೈಲ್ವೆ ವಲಯದ ನಿರ್ಹವಣಾ ಸಮಸ್ಯೆ ಇತ್ಯರ್ಥದ ಜೊತೆಗೆ ಕೇರಳದ ರಾಜಕೀಯ ಪಕ್ಷಗಳ ಆಕ್ರೋಶವನ್ನು ಒಂದು ಹಂತದವರೆಗೆ ತಣ್ಣಗೆ ಮಾಡಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ.
ಪಾಲಕ್ಕಾಡ್ ಕೈತಪ್ಪಿಲಿರುವ ರೈಲ್ವೆ ನಿಲ್ದಾಣಗಳು:
ಸದ್ಯದ ರೈಲ್ವೆ ಮಂಡಳಿ ಪ್ರಸ್ತಾವದ ಅನ್ವಯ ಅ.1ರಿಂದ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಲಯದ ವ್ಯಾಪ್ತಿಯಿಂದ ಕರ್ನಾಟಕದ ಮಂಳೂರು ಕೇಂದ್ರ, ಮಂಗಳೂರು ಜಂಕ್ಷನ್, ಪಣಂಬೂರು (ನವ ಮಂಗಳೂರು ಬಂದರು ಯಾರ್ಡ್) ಮತ್ತು ಉಳ್ಳಾಲ ಕೇಂದ್ರಗಳು, ಮೈಸೂರಿನ ನೈಋತ್ಯ ರೈಲ್ವೆ ವಲಯಕ್ಕೆ ಒಳಪಡಲಿವೆ.


