ಆಗಸ್ಟ್ 28 ರಿಂದ ಹೊಸಪೇಟೆ ಮತ್ತು ಅರಸಿಕೆರೆ ನಡುವೆ ಕೊಟ್ಟೂರು ಮಾರ್ಗವಾಗಿ ಹೊಸ ಡೆಮು ವಿಶೇಷ ರೈಲು ಸಂಚಾರ ಆರಂಭವಾಗಲಿದೆ. ಈ ರೈಲು ವಾರದ ದಿನಗಳಲ್ಲಿ ಸಂಚರಿಸಲಿದ್ದು, ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳಿಂದ ದಾವಣಗೆರೆ ಕಡೆಗೆ ಹೋಗುವ ವಿದ್ಯಾರ್ಥಿಗಳು ಮತ್ತು ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ. ವಿಜಯನಗರ ರೈಲ್ವೆ ಬಳಕೆದಾರರ ಸಂಘ ಈ ಬೆಳವಣಿಗೆಯನ್ನು ಸ್ವಾಗತಿಸಿದೆ.

ವಿಜಯನಗರ: ಈ ಭಾಗದ ರೈಲ್ವೆ ಪ್ರಯಾಣಿಕರಿಗೆ ಆಶಾದಾಯಕ ಸುದ್ದಿಯನ್ನು ನೈಋತ್ಯ ರೈಲ್ವೆ ವಲಯ ಪ್ರಕಟಿಸಿದ್ದು, ಹೊಸಪೇಟೆ ಜಂಕ್ಷನ್‌ನಿಂದ ಅರಸಿಕೆರೆ ಜಂಕ್ಷನ್ ನಡುವೆ ಅನಿಮಿಯತ (ಆನ್ ರಿಸರ್ವಡ್) ಡೆಮು ವಿಶೇಷ ರೈಲು ಸಂಚಾರವನ್ನು ಆರಂಭಿಸಲು ನಿರ್ದೇಶಿಸಿ ಆದೇಶ ಹೊರಡಿಸಿದೆ.

ರೈಲು ಸಂಖ್ಯೆ 07343/07344

ಕೊಟ್ಟೂರು ಮಾರ್ಗವಾಗಿ ಈ ಡೆಮೊ ರೈಲು ಆ. 28ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ನ. 27ರ ವರೆಗೆ ಸಂಚರಿಸಲಿದೆ. ರೈಲು ಸಂಖ್ಯೆ 07343/07344 ಸಂಖ್ಯೆಯ ರೈಲು ಇದಾಗಿದ್ದು, ಹೊಸಪೇಟೆ ನಿಲ್ದಾಣದಿಂದ ಬೆಳಗ್ಗೆ 6.30ಕ್ಕೆ ಸಂಚಾರ ಆರಂಭಿಸಿ ತುಂಗಭದ್ರಾ ಡ್ಯಾಂ, ವ್ಯಾಸನಕೆರೆ, ವ್ಯಾಸಕಾಲನಿ, ಮರಿಯಮ್ಮನಹಳ್ಳಿ, ಹಂಪಾಪಟ್ಟಣ, ಹಗರಿಬೊಮ್ಮನಹಳ್ಳಿ, ಮಾಲ್ವಿ, ಕೊಟ್ಟೂರಿಗೆ 8.30ರ ಸುಮಾರಿಗೆ ಬರಲಿದೆ. ಆನಂತರ ಬೆಣ್ಣಿಹಳ್ಳಿ, ಹರಪನಹಳ್ಳ, ತೆಲಿಗಿ, ದಾವಣಗೆರೆ, ಚಿಕ್ಕಜಾಜೂರು, ಹೊಳಲ್ಕೆರೆ, ಹೊಸದುರ್ಗ ರಸ್ತೆ, ಅಜ್ಜಾಂಪುರ, ಬೀರೂರು, ಕಡೂರು, ಬಾಣವರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಅರಸಿಕೇರೆಯಿಂದ ಮಧ್ಯಾಹ್ನ 2.30ಕ್ಕೆ ಬಿಟ್ಟು ಇದೇ ಮಾರ್ಗದ ಮೂಲಕ ಹೊಸಪೇಟೆಗೆ ರಾತ್ರಿ 9.30ರ ಸುಮಾರಿಗೆ ತಲುಪಲಿದೆ. 8 ಬೋಗಿಗಳ ಡೆಮೊ ಸಂಯೋಜನೆಯೊಂದಿಗೆ ಸೇವೆ ಒದಗಿಸಲು ರೈಲ್ವೆ ವಲಯ ಯೋಜನೆ ರೂಪಿಸಿದ್ದು, ಈ ಭಾಗದ ಪ್ರಯಾಣಿಕರು ವಿಶೇಷ ರೈಲು ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

ಕೊಟ್ಟೂರು ಮಾರ್ಗದ ಈ ನೂತನ ರೈಲು ವರ್ಷದಲ್ಲಿ ಪ್ರತಿ ಮೂರು ತಿಂಗಳ ಕಾಲ ಸಂಚರಿಸಲಿದ್ದು, ಈ ಸಂಚಾರ ಯಶಸ್ವಿಯಾಗಿ ಮೂರು ವರ್ಷಗಳ ಕಾಲ ನಂತರ ನಿರಂತರ ಸಂಚಾರ ಸೇವೆ ಒದಗಿಸಲಿದೆ. ಈ ಭಾಗದಲ್ಲಿ ಕೈಗೆತ್ತಿಕೊಂಡಿರುವ ರೈಲ್ವೆ ಮಾರ್ಗದ ವಿದ್ಯುದೀಕರಣ ಕಾರ್ಯ ಮುಗಿದ ಆನಂತರ ವ್ಯಾಸ ಕಾಲನಿ ಮತ್ತು ಅಮರಾವತಿಯ ಮಾರ್ಗ ಮೈಸೂರು ವರೆಗೆ ವಿಸ್ತರಣೆಗೊಳ್ಳುವ ಸಾಧ್ಯತೆ ಇದೆ. ಇದೊಂದು ಒಳ್ಳೆಯ ಬೆಳವಣಿಗೆ. ಶ್ರೀಧರ ಪತ್ತಿಕೊಂಡ ರೈಲ್ವೆ ಹೋರಾಟ ಸಮಿತಿ ಸಂಚಾಲಕ, ಕೊಟ್ಟೂರು

ರೈಲು ಸಂಚಾರ: ಬಳಕೆದಾರರ ಸಂಘ ಹರ್ಷ

ಆ. 28ರಂದು ಹೊಸಪೇಟೆ-ಅರಸೀಕೆರೆ ನೂತನ ಡೆಮೋ ರೈಲು ಸಂಚಾರಕ್ಕೆ ಚಾಲನೆ ದೊರೆಯಲಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. ವಿಜಯನಗರ ರೈಲ್ವೆ ಬಳಕೆದಾರರ ಸಂಘ ಹಾಗೂ ನಂದಿಪುರ ಮಠದ ಮಹೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ನಿರಂತರವಾಗಿ ಹಗರಿಬೊಮ್ಮನಹಳ್ಳಿ, ಕೊಟ್ಟೂರು ರೈಲ್ವೆ ಸಮಿತಿಗಳು ನಡೆಸಿದ ಹೋರಾಟಕ್ಕೆ

ನೈಋತ್ಯ ರೈಲ್ವೆ ವಲಯ ಸ್ಪಂದಿಸಿದೆ. ಈ ರೈಲಿನಿಂದ ವಿಜಯನಗರ ಜಿಲ್ಲೆಯ ಪಶ್ಚಿಮ ತಾಲೂಕುಗಳಿಂದ ದಾವಣಗೆರೆ ಕಡೆಗೆ ಸಂಚರಿಸುವ ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ, ಆಸ್ಪತ್ರೆಗಳಿಗೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಈ ಭಾಗದ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿರುವ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ಮತ್ತು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ವಿಜಯನಗರ ರೈಲ್ವೆ ಬಳಕೆದಾರರ ಸಂಘದ ಅಧ್ಯಕ್ಷ ವೈ. ಯಮುನೇಶ್, ಕಾರ್ಯದರ್ಶಿ ಮಹೇಶ ಕುಡುತಿನಿ ಅಭಿನಂದಿಸಿದ್ದಾರೆ.