ಕೆಎಸ್ಸಾರ್ಟಿಸಿ ತನ್ನ ಎಲ್ಲಾ ಬಸ್‌ಗಳಿಗೆ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ (ವಿಎಲ್‌ಟಿಡಿ) ಅಳವಡಿಸಲು ಮುಂದಾಗಿದೆ. ಈ ಬಸ್‌ಗಳ ಸಂಚಾರದ ಮೇಲೆ ನಿಗಾ ಇಡಲು ಮತ್ತು ಕ್ಷಣ ಕ್ಷಣದ ಮಾಹಿತಿ ಪಡೆಯಲು ಪ್ರತ್ಯೇಕ ಕಮಾಂಡ್‌ ಸೆಂಟರ್‌ ಅನ್ನು ಸಹ ನಿರ್ಮಿಸಲಾಗುತ್ತಿದೆ.

ಬೆಂಗಳೂರು (ಆ.26): ಕೆಎಸ್ಸಾರ್ಟಿಸಿ ಬಸ್‌ಗಳ ಮೇಲೆ ನಿಗಾ ವಹಿಸುವ ಉದ್ದೇಶದೊಂದಿಗೆ ನಿಗಮದ ಎಲ್ಲ ಬಸ್‌ಗಳಿಗೆ ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಡಿವೈಸ್‌ (ವಿಎಲ್‌ಟಿಡಿ) ಅಳವಡಿಸಲು ಮತ್ತು ಬಸ್‌ಗಳ ಮೇಲೆ ನಿಗಾವಹಿಸಲು ಪ್ರತ್ಯೇಕ ಕಮಾಂಡ್‌ ಸೆಂಟರ್‌ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.

ಸಾರ್ವಜನಿಕ ಸೇವೆ ನೀಡುವ ಎಲ್ಲ ವಾಹನಗಳಿಗೂ VLTD ಅಳವಡಿಕೆ

ಸಾರ್ವಜನಿಕ ಸೇವೆ ನೀಡುವ ಎಲ್ಲ ವಾಹನಗಳಿಗೂ ವಿಎಲ್‌ಟಿಡಿ ಅಳವಡಿಕೆಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಅದರಂತೆ ಖಾಸಗಿ ವಾಹನಗಳಷ್ಟೇ ಅಲ್ಲದೆ ಸರ್ಕಾರಿ ವಾಹನಗಳಲ್ಲೂ ವಿಎಲ್‌ಟಿಡಿ ಅಳವಡಿಸಬೇಕಿದೆ. ಅದರಂತೆ ಕೆಎಸ್ಸಾರ್ಟಿಸಿಯ 6063 ಬಸ್‌ಗಳ ಪೈಕಿ 2344 ಬಸ್‌ಗಳಿಗೆ ಈಗಾಗಲೇ ವಿಎಲ್‌ಟಿಡಿ ಅಳವಡಿಸಲಾಗಿದೆ. ಅದರ ಜತೆಗೆ ಉಳಿದ 3743 ಬಸ್‌ಗಳಿಗೆ ವಿಎಲ್‌ಟಿಡಿ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಬಸ್ ಬರುವ ಮಾಹಿತಿ, ಟ್ರ್ಯಾಕಿಂಗ್ ಸುಲಭ

ಹಾಗೆಯೇ, ವಿಎಲ್‌ಟಿಡಿ ಮೂಲಕ ಬಸ್‌ಗಳು ಯಾವ ಮಾರ್ಗದಲ್ಲಿ ಸಂಚರಿಸುತ್ತಿವೆ ಎಂಬುದು ಸೇರಿದಂತೆ ಮತ್ತಿತರ ಮಾಹಿತಿಯು ಲಭ್ಯವಾಗಲಿದೆ. ಆ ಮಾಹಿತಿಯನ್ನು ಸಂಗ್ರಹಿಸಿ, ಬಸ್‌ಗಳ ಮೇಲೆ ನಿಗಾ ವಹಿಸುವ ಉದ್ದೇಶದೊಂದಿಗೆ ಹೊಸದಾಗಿ ಕಮಾಂಡ್‌ ಸೆಂಟರ್‌ ನಿರ್ಮಾಣಕ್ಕೂ ಕೆಎಸ್ಸಾರ್ಟಿಸಿ ಮುಂದಾಗಿದೆ. ಅದಕ್ಕಾಗಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಕಮಾಂಡ್‌ ಸೆಂಟರ್‌ ಆರಂಭದ ನಂತರ ಬಸ್‌ಗಳ ಕ್ಷಣ ಮಾತ್ರದಲ್ಲಿ ಮಾಹಿತಿ ಲಭ್ಯವಾಗಲಿದೆ.