ಇಂಧನ ಬೆಲೆ ಏರಿಕೆಯಿಂದ ಸಾರಿಗೆ ನಿಗಮಗಳಿಗೆ ಉಂಟಾಗುತ್ತಿರುವ ನಷ್ಟದಿಂದಾಗಿ ಬಸ್ ಪ್ರಯಾಣ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ಯಾವಾಗ ದರ ಹೆಚ್ಚಳ?
ಬೆಂಗಳೂರು (ಆ.15): ಇಂಧನ ಬೆಲೆ ಹೆಚ್ಚಳದಿಂದ ನಾಲ್ಕು ನಿಗಮಗಳಿಗೆ ಭಾರೀ ನಷ್ಟವಾಗುತ್ತಿದೆ. ಆದ್ದರಿಂದ ಬಸ್ ಪ್ರಯಾಣ ದರ ಹೆಚ್ಚಳ ಅನಿವಾರ್ಯ. ಹೀಗಾಗಿ ಜನರಿಗೆ ಹೊರೆ ಆಗದಂತೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದರು.
ತೈಲ ಬೆಲೆ ಹೆಚ್ಚಳದಿಂದ ಬಸ್ ದರ ಹೆಚ್ಚಳ?
ಕೆಎಸ್ಸಾರ್ಟಿಸಿ(KSRTC) ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಸ್ ಪ್ರಯಾಣ ದರ ಹೆಚ್ಚಳ ಮಾಡಿದ ನಂತರ 9ಕ್ಕೂ ಹೆಚ್ಚಿನ ಬಾರಿ ತೈಲೋತ್ಪನ್ನಗಳ ಬೆಲೆ ಹೆಚ್ಚಳ ಆಗಿದ್ದರೂ ಬಸ್ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಇದರಿಂದ ನಿಗಮಗಳಿಗೆ ಭಾರೀ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ ಎಂದರು.
ಅಧ್ಯಯನ ವರದಿ ಆಧರಿಸಿ ಬಸ್ ದರ ಹೆಚ್ಚಳ
ಬಸ್ ಪ್ರಯಾಣ ದರ ಹೆಚ್ಚಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ನಿವೃತ್ತ ಐಎಎಸ್ ಅಧಿಕಾರಿ ಅತುಲ್ ತಿವಾರಿ ನೇತೃತ್ವದಲ್ಲಿ ರಚಿಸಲಿರುವ ಸಮಿತಿ ದರ ಹೆಚ್ಚಳದ ಸಾಧಕ-ಬಾಧಕ, ಹಾಗೂ ನಿಗಮಗಳ ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ವರದಿ ನೀಡಲಿದೆ ಎಂದು ಹೇಳಿದರು.
ವರದಿಯನ್ನು ಮುಖ್ಯಮಂತ್ರಿ ಅವರು ಮತ್ತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಜನರಿಗೆ ಹೊರೆಯಾಗದಂತೆ ಪ್ರಯಾಣ ದರ ಹೆಚ್ಚಳ ಮಾಡಲಾಗುತ್ತದೆ ಎಂದು ವಿವರಿಸಿದರು.
ಎಲೆಕ್ಟ್ರಿಕ್ ಬಸ್‌ಗಳನ್ನು ಯಾವುದೇ ಕಾರಣಕ್ಕೂ ರದ್ದು ಮಾಡುವುದಿಲ್ಲ. ಪೂರ್ವ ನಿಗದಿಯಂತೆ ಕೇಂದ್ರ ಸರ್ಕಾರದಿಂದ 4500 ಇವಿ ಬಸ್‌ಗಳನ್ನು ಪಡೆಯಲಾಗುತ್ತದೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

