ಕೆಪಿಎಸ್‌ಸಿ ನೇಮಕಾತಿ ಹಗರಣದ ತನಿಖೆ ಚುರುಕುಗೊಂಡಿದ್ದು, ಪ್ರಮುಖ ಮಧ್ಯವರ್ತಿ ಬಸವರಾಜ್ ಕನ್ನಾಳೆಯ ಕರಾಳ ಜಾಲ ಬಯಲಾಗಿದೆ. ಶಾಸಕರ ಆಪ್ತ ಸಹಾಯಕನಾಗಿ ವಿಧಾನಸೌಧದಲ್ಲಿ ತನ್ನ ಪ್ರಭಾವ ಬಳಸಿ, ನೇಮಕಾತಿ, ವರ್ಗಾವಣೆ ದಂಧೆಗಳ ಮೂಲಕ ನೂರಾರು ಕೋಟಿ ಸಂಪಾದಿಸಿದ ಈತನ ಅಕ್ರಮಗಳನ್ನು ಸಿಐಡಿ ತನಿಖೆ ಬಹಿರಂಗಪಡಿಸಿದೆ.
ಬೆಂಗಳೂರು (ಸೆ.13): ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣದ ತನಿಖೆ ಚುರುಕುಗೊಂಡಿದ್ದು, ಪ್ರಕರಣದ ಪ್ರಮುಖ ಮಧ್ಯವರ್ತಿ ಬಸವರಾಜ್ ಕನ್ನಾಳೆಯ ಕರಾಳ ಜಾಲ ಸಿಐಡಿ (CID) ವಿಚಾರಣೆ ವೇಳೆ ಬಯಲಾಗಿದೆ. ಕೇವಲ ಐದೇ ವರ್ಷಗಳಲ್ಲಿ ಶೂನ್ಯದಿಂದ ನೂರಾರು ಕೋಟಿ ಒಡೆಯನಾಗಿ ಬೆಳೆದ ಈತನ ಹಿನ್ನೆಲೆ ಹಾಗೂ ವಿಧಾನಸೌಧದ ಕಾರಿಡಾರ್‌ನಲ್ಲಿ ನಡೆಸಿದ ಅಕ್ರಮ ದಂಧೆಗಳು ತನಿಖಾಧಿಕಾರಿಗಳನ್ನೇ ಬೆಚ್ಚಿಬೀಳಿಸಿವೆ.
ಭಾಲ್ಕಿಯಿಂದ ದೆಹಲಿ ಯುಪಿಎಸ್‌ಸಿ ಕೋಚಿಂಗ್‌ವರೆಗೆ!
ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ಹುಟ್ಟಿ ಬೆಳೆದ ಬಸವರಾಜ್ ಕನ್ನಾಳೆ, ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ (KSOU) ಸ್ನಾತಕೋತ್ತರ ಪದವಿ ಪೂರೈಸಿದ್ದ. ಬಳಿಕ ನಾಗರಿಕ ಸೇವಾ ಪರೀಕ್ಷೆ (UPSC) ಬರೆಯುವ ಕನಸು ಹೊತ್ತು ದೆಹಲಿಗೆ ತೆರಳಿ, ಅಲ್ಲಿನ ಪ್ರತಿಷ್ಠಿತ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಕೂಡ ಪಡೆದುಕೊಂಡಿದ್ದ. ಆದರೆ, ಈ ಐಎಎಸ್/ಐಪಿಎಸ್ ಕನಸಿನ ಹಾದಿಯಲ್ಲೇ ಆತನಿಗೆ ಭ್ರಷ್ಟಾಚಾರದ ಸುಲಭ ಮಾರ್ಗ ಕಂಡಿತ್ತು.
ರಾಜಕೀಯ ನಂಟು & ಶಾಸಕರ ಪಿಎ ಆಗಿ ಎಂಟ್ರಿ:
ದೆಹಲಿ ಮತ್ತು ಮೈಸೂರಿನ ದಿನಗಳಲ್ಲಿ ಮೈಸೂರು ಭಾಗದ ಶಾಸಕರೊಬ್ಬರ ಪುತ್ರನ ಪರಿಚಯದ ಮೂಲಕ ಮೊದಲು ಜೆಡಿಎಸ್ (JDS) ಸೇರಿದ್ದ. ಬಳಿಕ ತನ್ನ ಸಮುದಾಯದ ಮುಖಂಡರ ಒಡನಾಟ ಬೆಳೆಸಿಕೊಂಡು ಬಿಜೆಪಿ (BJP) ಕಡೆಗೆ ವಾಲಿದ. 2018 ರಿಂದ 2023ರ ಅವಧಿಯಲ್ಲಿ ಬೀದರ್ ಭಾಗದ ಬಿಜೆಪಿ ಶಾಸಕರೊಬ್ಬರ ಆಪ್ತ ಸಹಾಯಕನಾಗಿ (PA) ನೇಮಕಗೊಂಡಿದ್ದೇ ಈತನ ಜೀವನದ ಅತಿದೊಡ್ಡ ಟರ್ನಿಂಗ್ ಪಾಯಿಂಟ್ ಆಯಿತು.
ಶಾಸಕರ ಪಿಎ ಆದ ಬಳಿಕ ವಿಧಾನಸೌಧವೇ ಆತನ ಪ್ರಮುಖ ಕಾರ್ಯಸ್ಥಾನವಾಯಿತು. ಕೈಯಲ್ಲಿ ಫೈಲ್ ಹಿಡಿದು ವಿಧಾನಸೌಧದ ಕೊಠಡಿಗಳಿಗೆ ನಿರಂತರ ಓಡಾಟ ನಡೆಸುತ್ತಿದ್ದ ಕನ್ನಾಳೆ, ಎಲ್ಲಾ ಹಂತದ ಸರ್ಕಾರಿ ಅಧಿಕಾರಿಗಳೊಂದಿಗೆ ಬಲವಾದ ಸಂಪರ್ಕ ಜಾಲವನ್ನು ಹೆಣೆದಿದ್ದ.
ಐಎಎಸ್ ಜ್ಞಾನೇಂದ್ರ ಜತೆ ನಂಟು: ನೂರಾರು ಕೋಟಿ ಲೂಟಿ!
ವಿಧಾನಸೌಧದಲ್ಲಿ ಅಧಿಕಾರಿಗಳಿಗೆ ದುಬಾರಿ ಉಡುಗೊರೆಗಳನ್ನು ನೀಡಿ, ನಾಯಕರೊಂದಿಗೆ ಮೋಜು-ಮಸ್ತಿ ಕೂಟಗಳನ್ನು ಆಯೋಜಿಸುತ್ತಾ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಒಂದು ಹಂತದಲ್ಲಿ ಕೆಪಿಎಸ್‌ಸಿ ಸದಸ್ಯರನ್ನೇ ತನ್ನ ಹಿಡಿತಕ್ಕೆ ತೆಗೆದುಕೊಂಡು ಉದ್ಯೋಗ ಆಕಾಂಕ್ಷಿಗಳಿಂದ ಕೋಟಿ ಕೋಟಿ ಹಣ ವಸೂಲಿ ಮಾಡಲು ಆರಂಭಿಸಿದ್ದ. ಐಎಎಸ್ ಅಧಿಕಾರಿ ಜ್ಞಾನೇಂದ್ರ ಸೇರಿದಂತೆ ಹಲವು ಉನ್ನತಾಧಿಕಾರಿಗಳ ಜತೆ ಕೈಜೋಡಿಸಿ ನೂರಾರು ಕೋಟಿ ಆಸ್ತಿ ಸಂಪಾದಿಸಿದ್ದಾನೆ ಎಂಬ ಸ್ಫೋಟಕ ಸತ್ಯ ಸಿಐಡಿ ತನಿಖೆಯಲ್ಲಿ ಬಯಲಾಗಿದೆ.
ಕೇವಲ ಕೆಪಿಎಸ್‌ಸಿ ಅಷ್ಟೇ ಅಲ್ಲ; ವರ್ಗಾವಣೆ, ರಿಯಲ್ ಎಸ್ಟೇಟ್ ದಂಧೆ!
ವಿಚಾರಣೆ ವೇಳೆ ಕನ್ನಾಳೆ ನೀಡಿರುವ ಹೇಳಿಕೆಗಳು ರಾಜಕೀಯ ವಲಯದಲ್ಲೂ ಸಂಚಲನ ಸೃಷ್ಟಿಸಿವೆ. ತನಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ನಾಯಕರ ಜತೆ ನಿಕಟ ಸಂಪರ್ಕವಿದೆ ಎಂದು ಹೇಳಿಕೊಂಡಿದ್ದಾನೆ. ಕೇವಲ ನೇಮಕಾತಿ ಅಕ್ರಮ ಮಾತ್ರವಲ್ಲದೆ, ಅಧಿಕಾರಿಗಳ ವರ್ಗಾವಣೆ ದಂಧೆ, ಟ್ರಾವೆಲ್ಸ್ ಬಿಸಿನೆಸ್ ಹಾಗೂ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಹೂಡಿಕೆ ಮಾಡಿ ಕಪ್ಪು ಹಣವನ್ನು ಬಿಳಿ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಸದ್ಯ ಸಿಐಡಿ ಬಲೆಗೆ ಬಿದ್ದು ತೀವ್ರ ವಿಚಾರಣೆ ಎದುರಿಸುತ್ತಿರುವ ಬಸವರಾಜ್ ಕನ್ನಾಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕಂಬಿ ಎಣಿಸುತ್ತಿದ್ದಾನೆ. ಈತನ ಜಾಲದಲ್ಲಿ ಇನ್ನೆಷ್ಟು ಜನ ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂಬುದು ಮುಂದಿನ ತನಿಖೆಯಿಂದ ಹೊರಬರಬೇಕಿದೆ.


