ಕ್ರಿಕೆಟಿಗ ಮೊಹ್ಮದ್ ಶಮಿ ಸಹೋದರನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಮದುವೆ ಆಗ್ತೀನಿ ಎಂದು ಕುರಾನ್ ಮೇಲೆ ಆಣೆ ಪ್ರಮಾಣ ಮಾಡಿ ತನಗೆ ಮೋಸ ಮಾಡಿದ್ದಾನೆ ಎಂದು ಮಹಿಳೆಯೊಬ್ಬರು ಲಕ್ನೋದಲ್ಲಿ ಕಣ್ಣೀರು ಇಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಕುರಿತ ಮಾಹಿತಿ ಇಲ್ಲಿದೆ.
ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹ್ಮದ್ ಶಮಿ ಅವರ ಸಾಂಸಾರಿಕ ಬದುಕು ವಿವಾದದಿಂದ ಕುಡಿರೋದು ಗೊತ್ತೇ ಇದೆ. ಇದೀಗ ಅವರ ಸಹೋದರ ಮಹ್ಮದ್ ಕೈಫ್ ವಿರುದ್ಧ ಲಕ್ನೋ ಮೂಲದ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಮದುವೆಯಾಗುವುದಾಗಿ ಸುಳ್ಳು ಭರವಸೆ ನೀಡಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ಶಮಿ ಕುಟುಂಬದಲ್ಲಿ ಮತ್ತೊಮ್ಮೆ ಸಂಚಲನ ಮೂಡಿಸಿದೆ.
ಮಹಿಳೆಯ ಆರೋಪ ಏನು?
ಗಂಭೀರ ಆರೋಪ ಮಾಡಿರುವ ಮಹಿಳೆ ಕಾನೂನು ಹೋರಾಟ ಮಾಡುತ್ತಿರೋದಾಗಿ ತಿಳಿಸಿದ್ದಾರೆ. ಆದರೆ ಮಹಿಳೆಯ ಆರೋಪಕ್ಕೆ ಸಂಬಂಧಿಸಿ ಪೊಲೀಸ್ ಅಧಿಕಾರಿಗಳಿಂದ ಯಾವುದೇ ಮಾಹಿತಿ ಹೊರಬಿದ್ದಿಲ್ಲ. ಮಹಿಳೆ ಮಾಡಿದ ಆರೋಪದ ಪ್ರಕಾರ... 2020ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಮಹಮ್ಮದ್ ಕೈಫ್ ಪರಿಚಯವಾಗಿದ್ದರು. ನನಗೆ ಈಗಾಗಲೇ ಮದುವೆ ಆಗಿತ್ತು. ಈಗ ಡಿವೋರ್ಸ್ ಆಗಿದೆ. ಆದರೆ ಒಬ್ಬ ಮಗನಿದ್ದಾನೆ ಎಂದು ಪರಿಚಯ ಮಾಡಿಕೊಳ್ಳುವ ವೇಳೆ ಕೈಫ್‌ಗೆ ತಿಳಿಸಿದ್ದೆ. ಆಗ ಅವರು ನನ್ನ ಹಿಂದಿನ ಜೀವನದ ಬಗ್ಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ.
ನನ್ನನ್ನು ಮದುವೆ ಆಗೋದಾಗಿ ಭರವಸೆ ನೀಡಿದ್ದರು. ಹಲವು ಬಾರಿ ಮದುವೆ ಆಗ್ತೀನಿ ಎಂದು ಕುರಾನ್ ಮೇಲೆ ಪ್ರಮಾಣ ಮಾಡಿದ್ದರು. ಅವರ ಮಾತನ್ನು ನಂಬಿ, ಏರ್‌ಲೈನ್ ಕ್ಯಾಬಿನ್ ಕ್ರೂ ಕೆಲಸವನ್ನೂ ಬಿಟ್ಟಿದ್ದೆ. ಮದುವೆ ವಿಚಾರ ಪ್ರಸ್ತಾಪಿಸಿದಾಗಲೆಲ್ಲಾ ಕೈಫ್ ತಾವು ಇದ್ದ ನಗರಕ್ಕೆ ಕರೆಸಿಕೊಳ್ಳುತ್ತಿದ್ದರು. ಐಪಿಎಲ್ ಹರಾಜು ಮುಗಿದ ಬಳಿಕ ಮದ್ವೆ ಆಗೋದಾಗಿ ಪ್ರಮಾಣ ಮಾಡಿ ಭರವಸೆ ನೀಡಿದ್ದರು. 2024ರ ಅಕ್ಟೋಬರ್ 11ರಂದು ಲಕ್ನೋದಲ್ಲಿ ಇಬ್ಬರೂ ಭೇಟಿಯಾಗಿದ್ದೆವು. ಆ ಸಮಯದಲ್ಲಿ ಬೆಂಗಾಲ್ ರಣಜಿ ತಂಡ ಲಕ್ನೋದಲ್ಲಿತ್ತು. ಈ ವೇಳೆ ಗೋಮತಿ ನಗರದ ಹಯಾತ್ ಹೋಟೆಲ್‌ಗೆ ತಮ್ಮನ್ನು ಕೈಫ್ ಕರೆಸಿಕೊಂಡು ನನ್ನ ಮೇಲೆ ಬಲತ್ಕಾರ ಮಾಡಿದರು. ಲಕ್ನೋ ಮಾತ್ರವಲ್ಲದೆ ದೆಹಲಿ ಮತ್ತು ಕೋಲ್ಕತ್ತಾ ಸೇರಿದಂತೆ ಹಲವು ನಗರಗಳಲ್ಲಿ ಇಂತಹ ಘಟನೆಗಳು ನಡೆದಿವೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಸಂಬಂಧ ಪೊಲೀಸ್ ಅಧಿಕಾರಿಗಳಿಗೆ ನಾನು ದೂರು ನೀಡಿದ್ದೇನೆ. ಪೂರ್ವ ವಿಭಾಗದ ಡಿಸಿಪಿ ಕಚೇರಿಗೂ ತೆರಳಿ ಮಹಮ್ಮದ್ ಕೈಫ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದೇನೆ. ಅವರು ಎಷ್ಟೇ ಪ್ರಭಾವಿ ಆಗಿದ್ದರೂ ಹೋರಾಟ ಮಾಡುತ್ತೇನೆ. ನನಗೆ ಮೋಸ ಆಗಿದೆ, ನ್ಯಾಯ ಬೇಕು ಎಂದು ಆರೋಪಿಸಿದ್ದಾಳೆ. ಇನ್ನು, ಪ್ರಕರಣ ಸಂಬಂಧ ಯಾವುದೇ ಕೇಸ್ ದಾಖಲಾಗಿರುವ ಬಗ್ಗೆ ಪೊಲೀಸರಿಂದ ಮಾಹಿತಿ ಇಲ್ಲ. ಕೈಫ್ ಅಥವಾ ಅವರ ಕುಟುಂಬದವರು ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ಸದ್ಯ ಶಮಿ ಸಹೋದರ ವಿರುದ್ಧ ಕೇಳಿಬಂದಿರುವ ಆರೋಪ ಭಾರೀ ಸಂಚಲನ ಸೃಷ್ಟಿಸಿದೆ. ಯಾವುದು ಸರಿ ಯಾವುದು ತಪ್ಪು ಅನ್ನೋದು ಪೊಲೀಸ್ ತನಿಖೆಯಿಂದ ಮಾತ್ರ ತಿಳಿಯಬೇಕಿದೆ. ಒಂದು ವೇಳೆ ಆ ಮಹಿಳೆಗೆ ನಿಜವಾಗಿಯೂ ಅನ್ಯಾಯವಾಗಿದ್ದರೆ ನ್ಯಾಯ ಸಿಗಬೇಕು ಎಂಬ ಆಗ್ರಹ ಸೋಶಿಯಲ್ ಮೀಡಿಯಾದಲ್ಲಿ ಕೇಳಿಬಂದಿದೆ.


