ವರ್ಷದ ಕೊನೆಯ ಗ್ರ್ಯಾನ್ ಸ್ಲಾಂ ಯುಎಸ್ ಓಪನ್ ಟೆನಿಸ್ ಟೂರ್ನಿಗೆ ಚಾಲನೆ ದೊರೆತಿದೆ. ಜೋಕೋವಿಚ್, ಆಲ್ಕರಜ್, ಸಬಲೆಂಕಾ, ಸ್ವಿಯಾಟೆಕ್ ಸೇರಿದಂತೆ ವಿಶ್ವದ ಅಗ್ರ ಆಟಗಾರರು ಕಣದಲ್ಲಿದ್ದು, ಈ ಬಾರಿ ದಾಖಲೆಯ ₹52.6 ಕೋಟಿ ಬಹುಮಾನ ಮೊತ್ತವನ್ನು ಘೋಷಿಸಲಾಗಿದೆ. ಆದರೆ, ಸಿಂಗಲ್ಸ್ ವಿಭಾಗದಲ್ಲಿ ಯಾವುದೇ ಭಾರತೀಯ ಆಟಗಾರರು ಸ್ಪರ್ಧಿಸುತ್ತಿಲ್ಲ.
ನ್ಯೂಯಾರ್ಕ್: ವರ್ಷದ ಕೊನೆ ಗ್ರ್ಯಾನ್ ಸ್ಲಾಂ ಟೂರ್ನಿಯಾಗಿರುವ ಯುಎಸ್ ಓಪನ್ ಟೆನಿಸ್‌ಗೆ ಭಾನುವಾರ ಚಾಲನೆ ಸಿಗಲಿದೆ. ಈ ಮೂಲಕ ವಿಶ್ವದೆಲ್ಲೆಡೆಯ ದಿಗ್ಗಜ ಹಾಗೂ ತಾರಾ ಟೆನಿಸಿಗರ ಸಮಾಗಮಕ್ಕೆ ಮತ್ತೊಮ್ಮೆ ವೇದಿಕೆ ಸಜ್ಜಾಗಿದೆ.
2024ರ ಯುಎಸ್ ಓಪನ್ ಸೇರಿ 5 ಗ್ರ್ಯಾನ್‌ಸ್ಲಾಮ್ ಟ್ರೋಫಿ ಗೆದ್ದಿರುವ ವಿಶ್ವ ನಂ.1 ಆಟಗಾರ ಯಾನಿಕ್ ಸಿನ್ನರ್ ಈ ಬಾರಿ ಗಾಯದಿಂದಾಗಿ ಆಡುತ್ತಿಲ್ಲ. ಹಾಲಿ ಚಾಂಪಿಯನ್, ಸ್ಪೇನ್‌ನ ಯುವ ಸೂಪರ್‌ಸ್ಟಾರ್ ಕಾರ್ಲೋಸ್ ಆಲ್ಕರಜ್, 4 ಬಾರಿ ಟ್ರೋಫಿ ವಿಜೇತ ದಿಗ್ಗಜ ಟೆನಿಸಿಗ, ಸರ್ಬಿಯಾದ ನೊವಾಕ್ ಜೋಕೋವಿಚ್, 2021ರ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೆವ್, ಇತ್ತೀಚೆಗಷ್ಟೇ ಫ್ರೆಂಚ್ ಓಪನ್ ಚಾಂಪಿಯನ್ ಆಗಿದ್ದ ಅಲೆಕ್ಸಾಂಡರ್ ಜ್ವೆರೆವ್ ಸೇರಿ ಪ್ರಮುಖರು ಈ ಬಾರಿ ಕಣದಲ್ಲಿದ್ದಾರೆ.ಮಹಿಳಾ ಸಿಂಗಲ್ಸ್ ವಿಭಾಗದಲ್ಲೂ ಹಲವು ಘಟಾನುಘಟಿಗಳು ಸ್ಪರ್ಧಿಸಲಿದ್ದಾರೆ. ಕಳೆದೆರಡು ಆವೃತ್ತಿಗಳ ಚಾಂಪಿಯನ್, ವಿಶ್ವ ನಂಬರ್ 1 ಆಟಗಾರ್ತಿ, ಬೆಲಾರಸ್‌ನ ಅರೈನಾ ಸಬಲೆಂಕಾ, 2022ರ ಯುಎಸ್ ಓಪನ್ ಸೇರಿ 6 ಗ್ರ್ಯಾನ್ ಸ್ಲಾಮ್ ವಿಜೇತೆ, ಪೋಲೆಂಡ್‌ನ ಇಗಾ ಸ್ವಿಯಾಟೆಕ್, ಅಮೆರಿಕದ ಯುವ ತಾರೆ, 2023ರ ಟ್ರೋಫಿ ವಿಜೇತೆ ಕೊಕೊ ಗಾಫ್, 2018, 2020ರ ಚಾಂಪಿಯನ್, ಜಪಾನಿನ ನವೊಮಿ ಒಸಾಕ ಸೇರಿ ಪ್ರಮುಖರು ಈ ಬಾರಿ ಪ್ರಮುಖ ಆಕರ್ಷಣೆ ಎನಿಸಿಕೊಳ್ಳಲಿದ್ದಾರೆ.
ಈ ಸಲ ಟೂರ್ನಿಯಲ್ಲಿ ಭಾರತೀಯರು ಇಲ್ಲ
ಈ ಬಾರಿ ಯುಎಸ್ ಓಪನ್ ಸಿಂಗಲ್ಸ್ ವಿಭಾಗದಲ್ಲಿ ಯಾವುದೇ ಭಾರತೀಯರು ಸ್ಪರ್ಧಿಸಲ್ಲ. ಸುಮಿತ್ ನಗಾಲ್ ಅರ್ಹತಾ ಸುತ್ತಿನಲ್ಲಿ ಆಡಿದ್ದು, ಮುಖ್ಯ ಸುತ್ತು ಪ್ರವೇಶಿಸಲು ವಿಫಲರಾಗಿದ್ದಾರೆ. ಪುರುಷರ ಡಬಲ್ಸ್ ವಿಭಾಗದ ಆಟಗಾರರ ಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.
ಸಿಂಗಲ್ಸ್‌ನಲ್ಲಿ ಗೆದ್ದರೆ ಸಿಗುತ್ತೆ ₹52.6 ಕೋಟಿ!
ಈ ಬಾರಿ ಸಿಂಗಲ್ಸ್ ವಿಭಾಗಗಳಲ್ಲಿ ಗೆದ್ದವರಿಗೆ 5.5 ಮಿಲಿಯನ್ ಯುಎಸ್ ಡಾಲರ್(ಸುಮಾರು 52.65 ಕೋಟಿ ರು.) ನಗದು ಬಹುಮಾನ ಲಭಿಸಲಿದೆ. ಇದು ಗ್ರ್ಯಾನ್‌ಸ್ಲಾಂ ಟೆನಿಸ್‌ನಲ್ಲೇ ಅತ್ಯಧಿಕ. ಕಳೆದ ಬಾರಿ ಗೆದ್ದವರಿಗೆ ₹42.87 ಕೋಟಿ ಲಭಿಸಿತ್ತು. ಈ ಬಾರಿ ಒಟ್ಟಾರೆ ಟೂರ್ನಿಯ ಬಹುಮಾನ ಮೊತ್ತವನ್ನು 1033 ಕೋಟಿ ರು.ಗೆ ಹೆಚ್ಚಿಸಲಾಗಿದೆ. ಇದು ಕಳೆದ ಬಾರಿಗಿಂತ ಶೇ.20ರಷ್ಟು ಹೆಚ್ಚು. ರನ್ನರ್-ಅಪ್ ಆದವರಿಗೆ ₹26.80 ಕೋಟಿ, ಸೆಮಿಫೈನಲ್ ಪ್ರವೇಶಿಸಿದವರಿಗೆ ತಲಾ ₹13.88 ಕೋಟಿ ನಗದು ಲಭಿಸಲಿದೆ. ಟೂರ್ನಿಯಲ್ಲಿ ಆಡಲು ಅವಕಾಶ ಪಡೆದ ಪ್ರತಿ ಆಟಗಾರರೂ ಕನಿಷ್ಠ ₹1.34 ಕೋಟಿ ನಗದು ಬಹುಮಾನ ಪಡೆದುಕೊಳ್ಳಲಿದ್ದಾರೆ.


