ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಡ್ರಾಗೊಂಡ ಬಳಿಕ, ಮಾಜಿ ಆಟಗಾರ ಮೊಹಮ್ಮದ್ ಕೈಫ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿರಾಟ್ ಕೊಹ್ಲಿ ತಂಡದಲ್ಲಿದ್ದಿದ್ದರೆ, ಅವರ ಹುರುಪು ಮತ್ತು ಆಕ್ರಮಣಕಾರಿ ಮನೋಭಾವದಿಂದ ಪಂದ್ಯದ ಫಲಿತಾಂಶವೇ ಬದಲಾಗುತ್ತಿತ್ತು ಎಂದು ಕೈಫ್ ಹೇಳಿದ್ದಾರೆ. ಕೊಹ್ಲಿಯ ಅನುಪಸ್ಥಿತಿಯಲ್ಲಿ ತಂಡದ ಎನರ್ಜಿ ಲೆವೆಲ್ ಕಡಿಮೆಯಾಗಿತ್ತು ಎಂಬುದನ್ನು ಅವರು ಬೊಟ್ಟು ಮಾಡಿದ್ದಾರೆ.

ಕೊಲಂಬೋ: "ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಆಡಿದ್ದರೆ, ಪಂದ್ಯದ ಫಲಿತಾಂಶವೇ ಬೇರೆಯಾಗಿರುತ್ತಿತ್ತು," ಹೀಗಂತ ಹೇಳಿದ್ದಾರೆ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್. ಗೆಲುವಿನ ಸನಿಹಕ್ಕೆ ಬಂದು ಭಾರತ ತಂಡ ಡ್ರಾನಲ್ಲಿ ಸಮಾಧಾನಪಟ್ಟುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಕೈಫ್ ಈ ಮಾತುಗಳನ್ನಾಡಿದ್ದಾರೆ. ಅಂತಿಮ ದಿನ ಶ್ರೀಲಂಕಾ ತಂಡ ಕೇವಲ ನಾಲ್ಕು ವಿಕೆಟ್‌ ಮತ್ತು 16 ರನ್‌ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್‌ಗೆ ಇಳಿದಿತ್ತು. ಆದರೆ, ಸೋನಲ್‌ ದಿನುಶಾ ಅವರ ಅದ್ಭುತ ಆಟದಿಂದಾಗಿ ಲಂಕಾ 9 ವಿಕೆಟ್‌ಗೆ 429 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಹೀಗಾಗಿ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಕೈಫ್, ಟೆಸ್ಟ್ ಕ್ರಿಕೆಟ್ ಎಲ್ಲರಿಗೂ ಅಲ್ಲ, ದೊಡ್ಡ ಪಂದ್ಯದಲ್ಲಿ ಸತತವಾಗಿ ಬೌಲಿಂಗ್ ಮಾಡುವಾಗ ಆಟಗಾರರು ಆಕ್ಟಿವ್ ಆಗಿರುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ. "ಒಂದು ವೇಳೆ ವಿರಾಟ್ ಕೊಹ್ಲಿಯಂತಹ ಆಟಗಾರ ಇದ್ದಿದ್ದರೆ, ಅವರು ನಿರಂತರವಾಗಿ ಸಹ ಆಟಗಾರರನ್ನು ಹುರಿದುಂಬಿಸುತ್ತಿದ್ದರು. ಇದರಿಂದ ತಂಡದ ಎನರ್ಜಿ ಲೆವೆಲ್ ಹೆಚ್ಚಾಗುತ್ತಿತ್ತು. ಪಿಚ್‌ನಲ್ಲಿ ಚೆನ್ನಾಗಿ ಟರ್ನ್ ಸಿಗುತ್ತಿದೆ, ಸುಮ್ಮನೆ ಬೌಲಿಂಗ್ ಮಾಡಿದರೆ ವಿಕೆಟ್ ತಾನಾಗಿಯೇ ಬೀಳುತ್ತದೆ ಎಂಬ ಮನಸ್ಥಿತಿಯಲ್ಲಿ ನಾವು ಇದ್ದೆವು. ಎಲ್ಲೋ ಒಂದು ಕಡೆ ನಮ್ಮಲ್ಲಿ ಸ್ವಲ್ಪ ನಿರಾಸಕ್ತಿ ಕಾಣಿಸಿತು" ಎಂದು ಕೈಫ್ ವಿವರಿಸಿದ್ದಾರೆ.

ಕೊಹ್ಲಿ ಇದ್ದಿದ್ದರೇ ಫಲಿತಾಂಶ ಬೇರೆಯದ್ದೇ ಇರುತ್ತಿತ್ತು:

ಭಾರತ ತಂಡದ ಈ ಕೊರತೆಯನ್ನು ಬೊಟ್ಟು ಮಾಡಿದ ಕೈಫ್, ಕೊಹ್ಲಿ ಇದ್ದಿದ್ದರೆ ಲಂಕಾ ಆಟಗಾರ ಸೋನಲ್‌ ದಿನುಶಾ ಅವರನ್ನು ಮಾನಸಿಕವಾಗಿ ಒತ್ತಡಕ್ಕೆ ಸಿಲುಕಿಸುತ್ತಿದ್ದರು ಎಂದೂ ಸೇರಿಸಿದ್ದಾರೆ. "ನಮ್ಮ ಎನರ್ಜಿ ಲೆವೆಲ್ ತುಂಬಾ ಕಡಿಮೆ ಇತ್ತು. ಅದಕ್ಕಾಗಿಯೇ ನಾನು ಹೇಳಿದ್ದು, ಕೊಹ್ಲಿ ಇದ್ದಿದ್ದರೆ ಫಲಿತಾಂಶವೇ ಬೇರೆಯಾಗಿರುತ್ತಿತ್ತು ಅಂತ. ಅವರು ಎಲ್ಲರನ್ನೂ ಸದಾ ಎಚ್ಚರವಾಗಿಡುತ್ತಿದ್ದರು. ಜೋನಲ್ ದಿನುಶ ಮೇಲೆ ಒತ್ತಡ ಹೇರಲು ಕೊಹ್ಲಿಯಿಂದ ಸಾಧ್ಯವಾಗುತ್ತಿತ್ತು" ಎಂದು ಕೈಫ್ ಸ್ಪಷ್ಟಪಡಿಸಿದ್ದಾರೆ. ವಿರಾಟ್ ಕೊಹ್ಲಿ 2025ರ ಮೇ ತಿಂಗಳಿನಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಸದ್ಯ ಅವರು ಏಕದಿನ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದಾರೆ.

ವಿಜಯ್‌ ಹಜಾರೆ, ಪ್ಲವರ್‌ ಸಾಲಿಗೆ ಸೇರಿದ ದಿನುಶಾ

ಫಾಲೋಆನ್‌ಗೆ ತುತ್ತಾದ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಆಟಗಾರರ ಪಟ್ಟಿಗೆ ಸೋನಲ್‌ ದಿನುಶಾ ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ಭಾರತದ ವಿಜಯ್‌ ಹಜಾರೆ ಅವರು 1948ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ನಲ್ಲಿ ಹಾಗೂ 2001ರಲ್ಲಿ ಜಿಂಬಾಬ್ವೆಯ ಆ್ಯಂಡಿ ಫ್ಲವರ್‌ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದರು.

ಫಾಲೋಆನ್‌ಗೆ ತುತ್ತಾದ ಬಳಿಕ ಲಂಕಾ ಪಂದ್ಯ ಡ್ರಾ: 16 ವರ್ಷಗಳಲ್ಲೇ ಮೊದಲು

ಲಂಕಾ ತಂಡ ಕಳೆದ 16 ವರ್ಷಗಳಲ್ಲೇ ಮೊದಲ ಬಾರಿ ಟೆಸ್ಟ್‌ನಲ್ಲಿ ಫಾಲೋಆನ್‌ಗೆ ತುತ್ತಾದ ಬಳಿಕ ಪಂದ್ಯದಲ್ಲಿ ಸೋಲದೆ ಡ್ರಾ ಮಾಡಿಕೊಂಡಿತು. ಕೊನೆ ಬಾರಿ 2010ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಗಾಲೆಯಲ್ಲಿ ನಡೆದ ಟೆಸ್ಟ್‌ನಲ್ಲಿ ಲಂಕಾ ಫಾಲೋಆನ್‌ಗೆ ತುತ್ತಾಗಿದ್ದರೂ ಬಳಿಕ ಡ್ರಾ ಮಾಡಿಕೊಂಡಿತ್ತು.